ಬೆಂಗಳೂರು:ರಾಜ್ಯದಲ್ಲಿ ಆಂಬ್ಯುಲೆನ್ಸ್‌ಗಳ ತಡೆ ರಹಿತ ಸಂಚಾರಕ್ಕೆ ವ್ಯವಸ್ಥೆ ಮಾಡುವ ಸಲುವಾಗಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲ ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತಂತೆ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಬಿ.ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠ, ರಾಜ್ಯದಲ್ಲಿ ಸಂಚರಿಸುವ ಎಲ್ಲಾ ಆಂಬ್ಯುಲೆನ್ಸ್‌ಗಳನ್ನು ಮಾರ್ಪಡಿಸುವ ಸಂದರ್ಭದಲ್ಲಿ ಜಿಪಿಎಸ್ ಅಳವಡಿಕೆ ಮಾಡಿಕೊಂಡಿರಬೇಕು. ಜೊತೆಗೆ, ಕಾಲ ಕಾಲಕ್ಕೆ ನಿರ್ವಹಣೆ ಮಾಡುತ್ತಿರಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.
ಆಂಬ್ಯುಲೆನ್ಸ್‌ಗಳ ಸಂಚಾರಕ್ಕೆ ಪೊಲೀಸರು ಕಂಟ್ರೋಲ್ ರೂಂ ಪ್ರಾರಂಭ: ಅಲ್ಲದೆ, ಸರ್ಕಾರಿ ಮತ್ತು ಖಾಸಗಿ ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಕೆಗೆ ಸಂಬಂಧಿಸಿದಂತೆ ಸರ್ಕಾರದ ಆಂಬ್ಯುಲೆನ್ಸ್ ಮಾಲೀಕರು, ಆಂಬ್ಯುಲೆನ್ಸ್ ನಿರ್ಮಾಣ ಮಾಡುವ ಕಂಪೆನಿಗಳಿಗೆ ಅಗತ್ಯವಿರುವ ಸುತ್ತೋಲೆ ಹೊರಡಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ಸರ್ಕಾರಕ್ಕೆ ಸೂಚಿಸಿತು. ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪಿಸಿ ಆಂಬ್ಯುಲೆನ್ಸ್‌ಗಳ ಸಂಚಾರವನ್ನು ನಿರ್ವಹಣೆ ಮಾಡುವುದಕ್ಕಾಗಿ ಸಂಚಾರಿ ಪೊಲೀಸರು ಕಂಟ್ರೋಲ್ ರೂಂ ಪ್ರಾರಂಭಿಸಬೇಕು. ಆಂಬ್ಯುಲೆನ್ಸ್ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಸಂಚಾರ ನಿರ್ವಹಣೆ ಮಾಡಬೇಕು. ಯಾವ ಮಾರ್ಗದಲ್ಲಿ ಆಂಬ್ಯುಲೆನ್ಸ್ ಬರುತ್ತಿದೆ ಎಂಬುದನ್ನು ಗಮನಿಸಿ ಆ ಮಾರ್ಗದಲ್ಲಿ ವಾಹನಗಳನ್ನು ನಿಯಂತ್ರಿಸಬೇಕು. ಆ ಬಳಿಕ ಆಂಬ್ಯುಲೆನ್ಸ್ ನ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.