ಬೆಂಗಳೂರು:ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಫ್ರೀಡಂ ಪಾರ್ಕ್ನಲ್ಲಿ ಗಿಡ ನೆಡುವ ಮೂಲಕ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಶಾಸಕ ದಿನೇಶ್ ಗುಂಡೂರಾವ್ ಹಾಗೂ ಅಧಿಕಾರಿಗಳು ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ ನೀಡಿದರು.
ಕೋಟಿ ವೃಕ್ಷ ಸೇನೆ ಹಾಗೂ ಸಿಟಿಸನ್ಸ್ ಫಾರ್ ಸಿಟಿಸನ್ಸ್ ಎನ್ಜಿಒ ಸಹಭಾಗಿತ್ವದಲ್ಲಿ ನಗರದ ವಿವಿಧೆಡೆ ನಲವತ್ತು ಎಕರೆ ಜಾಗದಲ್ಲಿ ಜೂನ್ ತಿಂಗಳಿನಲ್ಲಿ ಹನ್ನೆರಡು ಲಕ್ಷ ಗಿಡ ನೆಟ್ಟು, ಹಂತ ಹಂತವಾಗಿ ಒಂದು ಕೋಟಿ ಗಿಡ ನೆಡಲು ಉದ್ದೇಶಿಸಲಾಗಿದೆ.
ಶಾಸಕ ದಿನೇಶ್ ಗುಂಡೂರಾವ್, ಮೇಯರ್ ಗೌತಮ್ ಕುಮಾರ್, ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹಾಗೂ ಕಾರ್ಪೋರೇಟರ್ಗಳು ಗಿಡ ನೆಟ್ಟು ಮಣ್ಣು ಹಾಕಿ ಪರಿಸರ ದಿನಾಚರಣೆ ಆಚರಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆಂಪಾಪುರ, ಅಟ್ಟೂರು, ಜ್ಞಾನಭಾರತಿ, ಕೂಡ್ಲು ಸೇರಿ ಒಟ್ಟು ನಾಲ್ಕು ಸಸ್ಯ ಕ್ಷೇತ್ರಗಳಿವೆ. ಕಳೆದ ವರ್ಷ ಒಟ್ಟು 1,80,000 ಗಿಡಗಳನ್ನು ಬೆಳೆಸಲಾಗಿದೆ. ಕಳೆದ ವರ್ಷ 75000 ಗಿಡಗಳನ್ನು ರಸ್ತೆ ಬದಿ ಹಾಗೂ ಇನ್ನಿತರ ಖಾಲಿ ಜಾಗಗಳಲ್ಲಿ ನೆಡಲಾಗಿದೆ ಎಂದು ಅಂಕಿ-ಅಂಶ ನೀಡಿದರು.
ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ ದಿನೇಶ್ ಗುಂಡೂರಾವ್ ಮಾತನಾಡಿ, ಪರಿಸರ, ಪೃಥ್ವಿಯನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಹವಾಮಾನ ವೈಪರಿತ್ಯ ತಡೆಯಬೇಕಿದೆ. ಎಷ್ಟು ಸಸಿ ನೆಟ್ಟಿದ್ದೇವೆ ಎನ್ನುವುದು ಮುಖ್ಯವಲ್ಲ. ಅರಣ್ಯ ಇಲಾಖೆಯವರು ಇಪ್ಪತ್ತು ಕೋಟಿ ನೆಟ್ಟಿದ್ದೇವೆ ಅಂತ ಸದನದಲ್ಲಿ ಹೇಳ್ತಾರೆ. ಆದ್ರೆ ಎಷ್ಟು ಗಿಡಗಳು ಬೆಳೆದಿವೆ, ನಿರ್ವಹಣೆಯಾಗಿವೆ ಎನ್ನುವುದು ಮುಖ್ಯ ಎಂದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಹಲಸೂರು ಕೆರೆಯಲ್ಲಿ ನಾವು ನೆಟ್ಟ ಗಿಡಗಳು ಕಾಡಿನ ರೀತಿ ಬೆಳೆದಿವೆ. ಪರಿಸರ ಕಾಪಾಡಲು ಎನ್ಜಿಒ ಜೊತೆ ಕೈಜೋಡಿಸಿ ಗಿಡ ಬೆಳೆಸಲಿದ್ದೇವೆ ಎಂದರು.