ಬೆಂಗಳೂರು: ಕೊರೊನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲೇ ದೇವಸ್ಥಾನ, ಮಾಲ್ ಹಾಗೂ ಹೋಟೆಲ್ಗಳಿಗೆ ಜನರು, ಅದರಲ್ಲೂ ಕೊರೊನಾ ಸೋಂಕಿತರು ಅಥವಾ ಶಂಕಿತರು ಪ್ರವೇಶಿಸುವ ಕುರಿತು ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್-19 ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಬೆಂಗಳೂರಿನ ಎನ್ ಜಿಓ ಸಂಸ್ಥೆಯೊಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ, ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಮದುವೆ, ಅಂತ್ಯಸಂಸ್ಕಾರದಲ್ಲಿ ಇಂತಿಷ್ಟೇ ಜನ ಪಾಲ್ಗೊಳ್ಳುವಂತೆ ನಿರ್ಬಂಧ ಹೇರಿರುವಂತೆ ದೇವಾಲಯಗಳಿಗೆ ತೆರಳುವ ಭಕ್ತಾದಿಗಳ ಸಂಖ್ಯೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಹಾಗೆಯೇ ಕೊರೊನಾ ಸೋಂಕಿತ ಅಥವಾ ಶಂಕಿತ ವ್ಯಕ್ತಿ ದೇವಾಲಯ ಆವರಣ ಪ್ರವೇಶಿಸಬಹುದೇ ಎಂಬುದರ ಬಗ್ಗೆಯೂ ಮಾರ್ಗಸೂಚಿಗಳಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಅಂಶಗಳ ಕುರಿತು ಮರು ಪರಿಶೀಲಿಸಿ ಪರಿಷ್ಕರಿಸಬೇಕೆಂದು ಸೂಚಿಸಿದೆ.
ಅಲ್ಲದೇ, ಈ ಮಧ್ಯೆ ಮಾರ್ಗಸೂಚಿಗಳ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ದೇವಾಲಯ, ಮಾಲ್, ರೆಸ್ಟೋರೆಂಟ್ಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸದಿದ್ದರೆ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.