ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ್ ವಿಧಾನಸೌಧದ ತಮ್ಮ ಕಚೇರಿಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ. ವಿಶೇಷವೆಂದರೆ ತಮ್ಮ ರಾಜಕೀಯ ಬದ್ಧ ಎದುರಾಳಿ ಡಿ.ಕೆ.ಶಿವಕುಮಾರ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಪಡೆದಿದ್ದ ಕೊಠಡಿಯನ್ನೇ ಯೋಗೇಶ್ವರ್ ಪಡೆದಿದ್ದಾರೆ.
ಡಿಕೆಶಿ ಇದ್ದ ಕೊಠಡಿಯನ್ನೇ ಪಡೆದ ಸಚಿವ ಸಿ.ಪಿ.ಯೋಗೇಶ್ವರ್!
ಡಿ.ಕೆ.ಶಿವಕುಮಾರ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಪಡೆದಿದ್ದ ಕೊಠಡಿಯನ್ನೇ ಈಗ ನೂತನ ಸಚಿವ ಸಿ.ಪಿ.ಯೋಗೇಶ್ವರ್ ಪಡೆದುಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 336, 337ರಲ್ಲಿ ಪೂಜೆ ಸಲ್ಲಿಸಿ ಕೊಠಡಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಸೇರಿದಂತೆ ಕೆಲವರಷ್ಟೇ ಹಾಜರಿದ್ದರು. ರಾಜಕೀಯ ಬದ್ಧ ವೈರಿಗಳಾಗಿರುವ ಡಿ.ಕೆ.ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶ್ವರ್ ಅದೇ ಕೊಠಡಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡಿ.ಕೆ.ಶಿವಕುಮಾರ್ಗೆ ಸವಾಲು ಹಾಕಿ ಮೈತ್ರಿ ಸರ್ಕಾರ ಪತನಕ್ಕೆ ಸಚಿವ ರಮೇಶ್ ಜಾರಕಿಹೊಳಿ ನಾಂದಿ ಹಾಡಿ ಡಿಕೆಶಿ ಹೊಂದಿದ್ದ ಜಲಸಂಪನ್ಮೂಲ ಖಾತೆಯನ್ನು ಪಡೆಯುತ್ತೇನೆಂದು ಪ್ರತಿಜ್ಞೆ ಮಾಡಿದ್ದರು.
ಅದೇ ರೀತಿ ಯೋಗೇಶ್ವರ್ ಸಹ ಡಿಕೆಶಿ ವಿರುದ್ಧ ತೊಡೆ ತಟ್ಟಿರುವುದು ಇತ್ತೀಚಿನ ಹೇಳಿಕೆಗಳಿಂದ ಗೊತ್ತಾಗುತ್ತದೆ. ಇನ್ನು ಬಿಜೆಪಿ ಸರ್ಕಾರ ರಚನೆಯಾದ ನಂತರ ಜಲಸಂಪನ್ಮೂಲ ಖಾತೆಯನ್ನೇ ಪಡೆಯುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾದರು. ಬದಲಾದ ಸನ್ನಿವೇಶದಲ್ಲಿ ಸಿ.ಪಿ.ಯೋಗೇಶ್ವರ್ ಪರ ಸಚಿವ ಸ್ಥಾನಕ್ಕೆ ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಲಾಬಿ ನಡೆಸಿದ್ದರು ಎನ್ನಲಾಗಿದೆ. ಕೊನೆಗೆ ತೀವ್ರ ವಿರೋಧದ ನಡುವೆಯೂ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಇದೀಗ ಡಿಕೆಶಿ ಪಡೆದಿದ್ದ ಕೊಠಡಿ ಹಂಚಿಕೆಯಲ್ಲೂ ಸಾಹುಕಾರ್ ಪಾತ್ರವಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿವೆ. ಡಿ.ಕೆ.ಶಿವಕುಮಾರ್ ಮೇಲಿನ ಕೋಪಕ್ಕೆ ಸದಾಶಿವನಗರದಲ್ಲಿ ಡಿಕೆಶಿ ನಿವಾಸದ ಹಿಂದೆಯೇ ಮನೆ ಮಾಡಿಕೊಂಡಿರುವ ರಮೇಶ್ ಜಾರಕಿಹೊಳಿಯ ಪಾತ್ರ ಸಿ.ಪಿ.ಯೋಗೇಶ್ವರ್ ನಡೆ ಹಿಂದೆ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ.