ಬೆಂಗಳೂರು:ಸಾಂಕ್ರಾಮಿಕ ಕೋವಿಡ್ ಅಟ್ಟಹಾಸಕ್ಕೆ ಇಡೀ ಜಗತ್ತೇ ನಲುಗಿದೆ. ಈ ಮಧ್ಯೆ ನಾನಾ ರೀತಿಯ ಫಂಗಸ್ ರೂಪಾಂತರಿಗಳು ಪತ್ತೆಯಾಗುತ್ತಿದ್ದು, ಜನರನ್ನು ಮತ್ತಷ್ಟು ನಿದ್ದೆಗೆಡೆಸಿದೆ. ಬ್ಲ್ಯಾಕ್, ವೈಟ್ ಹಾಗೂ ಯೆಲ್ಲೋ ಫಂಗಸ್ ಬಗ್ಗೆ ಕೇಳುತ್ತಿದ್ದವರಿಗೆ ಇದೀಗ ಗ್ರೀನ್ ಫಂಗಸ್ ನಿದ್ದೆಗೆಡಿಸಿದೆ.
ಮೈಸೂರು ಮೂಲದ ಕಾರ್ತಿಕೇಯನ್ ಎಂಬ ವೈದ್ಯರೊಬ್ಬರಿಗೆ ಏಪ್ರಿಲ್ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆಕ್ಸಿಜನ್ ಪ್ರಮಾಣ 80ರಷ್ಟು ಕುಸಿತ ಕಂಡಿದ್ದ ಕಾರಣ 12 ದಿನಗಳ ಕಾಲ ಐಸಿಯುನಲ್ಲಿದ್ದು ಚೇತರಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಬಳಿಕ ಅವರಿಗೆ ಮುಖದ ಭಾಗ ಮರಗಟ್ಟಿದ ಹಾಗೇ ಆಗಿತ್ತು. ಅನುಮಾನಗೊಂಡು ಪರೀಕ್ಷಿಸಿದಾಗ ಫಂಗಸ್ ಪತ್ತೆಯಾಗಿದ್ದು, ಬ್ಲ್ಯಾಕ್ ಫಂಗಸ್ ಜತೆಗೆ ಗ್ರೀನ್ ಫಂಗಸ್ ಇರುವುದು ತಿಳಿದು ಬಂದಿದೆ. ಬಳಿಕ ಇವರಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಗುಣಮುಖರಾಗಿದ್ದಾರೆ.
ಏನಿದು ಗ್ರೀನ್ ಫಂಗಸ್?:
ಬ್ಲ್ಯಾಕ್ ಫಂಗಸ್ಗೂ ಇದಕ್ಕೂ ವ್ಯತ್ಯಾಸವೇನು? ಯಾವ ಕಾರಣಕ್ಕೆ ಬರುತ್ತದೆ? ಇದರ ಲಕ್ಷಣಗಳೇನು? ಜನಸಾಮಾನ್ಯರು ಯಾವ ರೀತಿ ಮುಂಜಾಗ್ರತೆ ವಹಿಸಬೇಕು? ಚಿಕಿತ್ಸೆ ಏನು? ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಗ್ರೀನ್ ಫಂಗಸ್ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಇಎನ್ಟಿ ಹಾಗೂ ಎಂಡೋಸ್ಕೋಪಿ ಸರ್ಜನ್ ಡಾ.ಪ್ರಶಾಂತ್. ಆರ್ ರೆಡ್ಡಿ ಈ ಕುರಿತು ವಿವರಿಸಿದ್ದಾರೆ.
ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ವ್ಯಕ್ತಿಗೆ ಮುಖದ ಭಾಗದಲ್ಲಿ ಜೋಮು ಹಿಡಿದುಕೊಂಡಂತೆ ಆಗುತ್ತಿತ್ತು. ಅವರಿಗೆ ಬೇರೆ ಯಾವುದೇ ಲಕ್ಷಣಗಳು ಇರಲಿಲ್ಲ. ಹೀಗಾಗಿ, ಸಿಟಿ ಸ್ಕ್ಯಾನ್ ಹಾಗೂ ಎಂಡೋಸ್ಕೋಪಿ ಶಿಫಾರಸು ಮಾಡಲಾಗಿತ್ತು. ಈ ವೇಳೆ ಮುಖದ ಒಂದು ಭಾಗದಲ್ಲಿ ಇನ್ಫೆಕ್ಷನ್ ಆಗಿರುವುದು ಕಂಡು ಬಂದಿತ್ತು. ಆದರೆ ಇದು ಸಾಮಾನ್ಯವಾಗಿರದೆ ಫಂಗಸ್ ರೀತಿಯಲ್ಲಿ ಇದದ್ದು ಕಂಡು ಬಂದಿದೆ. ಕೂಡಲೇ ಸರ್ಜರಿ ಮಾಡಲಾಯಿತು.