ಕರ್ನಾಟಕ

karnataka

ETV Bharat / state

ಎಂಜಿನಿಯರಿಂಗ್‌ ವ್ಯಾಸಂಗ: ಕೆಲವು ಕೋರ್ಸ್​ಗೆ ಸೀಟು ಸಿಗಲ್ಲ: ಇನ್ನು ಕೆಲವನ್ನಂತೂ ಕೇಳೋರೇ ಇಲ್ಲ

ದೇಶಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮಂಜೂರಾದ ಸೀಟುಗಳಲ್ಲಿ ಕನಿಷ್ಠ 35-40 ಪ್ರತಿಶತದಷ್ಟು ಖಾಲಿ ಉಳಿಯುತ್ತಿವೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಮಾಡಿರುವ ದತ್ತಾಂಶ ವರದಿ ಹೇಳುತ್ತಿದೆ.

engineering council
engineering council

By

Published : Jun 27, 2023, 12:23 PM IST

Updated : Jun 27, 2023, 1:27 PM IST

ಬೆಂಗಳೂರು: ನನ್ನ ಮಗ ಎಂಜಿನಿಯರ್‌ ಎಂದು ಹೇಳಿಕೊಳ್ಳಲು ಪಾಲಕರು ಹಿಂದೆ ಹೆಮ್ಮೆ ಪಡುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದೆ. ಕೆಲವೇ ಕೆಲವು ಕೋರ್ಸ್‌ಗಳಲ್ಲಿ ಎಂಜಿನಿಯರಿಂಗ್‌ ಪೂರೈಸಿದರೆ ಮಾತ್ರ ಹೆಗ್ಗಳಿಕೆ ಎಂಬ ಭಾವನೆ ಮೂಡಲಾರಂಭಿಸಿದೆ. ಇದಕ್ಕಾಗಿಯೇ ಕೆಲ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಬೇಡಿಕೆ ಕುಸಿಯುತ್ತಿದೆ. ಮತ್ತೆ ಕೆಲವಕ್ಕೆ ವಿಪರೀತ ಹೆಚ್ಚಳ ಆಗಿ ಅನೈಸರ್ಗಿಕ ಸ್ಪರ್ಧೆ ಏರ್ಪಟ್ಟಿದೆ. ಕಳೆದ ವರ್ಷ ಸರಕಾರಿ ಕೋಟಾದ 21 ಸಾವಿರ ಸೀಟುಗಳು ಭರ್ತಿಯಾಗದೇ ಉಳಿದಿದ್ದವು. ಈ ವರ್ಷವೂ ಎಂಜಿನಿಯರಿಂಗ್‌ ಪ್ರವೇಶಕ್ಕೆ ಕೌನ್ಸೆಲಿಂಗ್‌ ಆರಂಭವಾಗಿದ್ದು, ಬಹುತೇಕ ಇಷ್ಟೇ ಸೀಟುಗಳು ಖಾಲಿ ಉಳಿದುಕೊಳ್ಳುವ ಆತಂಕ ಎದುರಾಗಿದೆ.

ಮತ್ತೊಂದೆಡೆ ಆತಂಕ ಮೂಡಿಸುವ ಸಂಗತಿ ಎಂದರೆ ಕಳೆದ ವರ್ಷ 33 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 'ಕಾಮೆಡ್‌-ಕೆ' ಕೋಟಾದಡಿ ಒಂದೇ ಒಂದು ಸೀಟು ಭರ್ತಿಯಾಗಿರಲಿಲ್ಲ. 43 ಖಾಸಗಿ ಕಾಲೇಜುಗಳಲ್ಲಿ ಶೇ 25ಕ್ಕಿಂತ ಕಡಿಮೆ ಸೀಟುಗಳು ಭರ್ತಿಯಾಗಿರುವುದು ಆಡಳಿತ ಮಂಡಳಿಗಳನ್ನು ಕಂಗೆಡಿಸಿದ್ದವು. ಕೋವಿಡ್‌ ಆತಂಕದಿಂದ ಹೊರಬಂದರೂ, ವಿದ್ಯಾರ್ಥಿಗಳು ಕಾಲೇಜಿನತ್ತ ಬಾರದಿರುವುದು ಇವರಿಗೆ ಆತಂಕ ತರಿಸಿದ್ದು, ಈ ಬಾರಿ ಅಂತಹ ಸ್ಥಿತಿ ನಿರ್ಮಾಣ ಆಗುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ, ಈ ವರ್ಷವೂ ಕೌನ್ಸೆಲಿಂಗ್‌ ಆರಂಭವಾಗಿ ಕೆಲ ದಿನ ಕಳೆದಿದ್ದರೂ, ನಿರೀಕ್ಷಿತ ಪ್ರತಿಕ್ರಿಯೆ ಸಿಗುತ್ತಿಲ್ಲ.

ಬೇಡಿಕೆಯಿರುವ ಪ್ರತಿಷ್ಠಿತ ಆರು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 'ಕಾಮೆಡ್‌-ಕೆ' ಕೋಟಾದಡಿ ಎಲ್ಲ ಸೀಟುಗಳು ಭರ್ತಿಯಾಗುತ್ತವೆ. ಆದರೆ ಉಳಿದಂತೆ 10 ಕಾಲೇಜುಗಳಲ್ಲಿ ಶೇ 80ರಿಂದ 99ರಷ್ಟು ಹಾಗೂ 16 ಕಾಲೇಜುಗಳಲ್ಲಿ ಶೇ 50ರಿಂದ 79, ಇನ್ನೂ 10 ಕಾಲೇಜುಗಳಲ್ಲಿ ಶೇ 25ರಿಂದ ಶೇ 49.99ರಷ್ಟು ಸೀಟುಗಳಷ್ಟೇ ಭರ್ತಿಯಾಗಿವೆ. 75 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಕಳೆದ ವರ್ಷ ಸಂಪೂರ್ಣ ವಿಫಲವಾಗಿದ್ದವು. ಈ ವರ್ಷವೂ ಅವರಿಗೆ ಆಶಾದಾಯಕ ಸ್ಥಿತಿ ಗೋಚರಿಸುತ್ತಿಲ್ಲ. ಹೆಚ್ಚಿದ ಶುಲ್ಕ, ಬೇರೆ ತರಗತಿಗಳಿಗೆ ಹೆಚ್ಚಿರುವ ಜನಪ್ರಿಯತೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರಕಾರಿ ಕೋಟಾದ ಮೂಲಕ ಹಂಚಿಕೆ ಮಾಡುವ 64 ಸಾವಿರ ಎಂಜಿನಿಯರಿಂಗ್‌ ಸೀಟುಗಳ ಪೈಕಿ ಈ ವರ್ಷ 21 ಸಾವಿರ ಸೀಟುಗಳು ಭರ್ತಿಯಾಗದೇ, ಕಳೆದ ವರ್ಷ ಹಾಗೆ ಉಳಿದಿದ್ದವು. ಹಾಗೆಯೇ, 'ಕಾಮೆಡ್‌-ಕೆ' ಕೋಟಾದಡಿ 16,236 ಸೀಟುಗಳ ಪೈಕಿ 10,175 ಸೀಟುಗಳು ಖಾಲಿ ಬಿದ್ದಿದ್ದವು. ಇದು ಈ ಸಾರಿ ಮರುಕಳಿಸಿದರೆ ದೊಡ್ಡ ಆತಂಕ ಸಹಜ.

ಬೇಡಿಕೆ ಇರುವ, ಇರದ ಕೋರ್ಸ್‌ಗಳು: ಕಂಪ್ಯೂಟರ್‌ ಸೈನ್ಸ್‌, ಇನ್ಫಾರ್ಮೇಷನ್‌ ಸೈನ್ಸ್‌ ಅಂಡ್​ ಎಂಜಿನಿಯರಿಂಗ್‌, ಮೆಕ್ಯಾನಿಕಲ್‌ ಹಾಗೂ ಸಿವಿಲ್‌ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಎಲ್ಲ ಕಾಲೇಜುಗಳಲ್ಲಿಯೂ ಹೆಚ್ಚಿನ ವಿದ್ಯಾರ್ಥಿಗಳು ಈ ಕೋರ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ಇದರಿಂದ ಉಳಿದ ಕೋರ್ಸ್‌ಗಳಲ್ಲಿ ಸೀಟುಗಳು ಭರ್ತಿಯಾಗದೆ ಹಾಗೇ ಉಳಿಯುತ್ತಿವೆ.

ಜನಪ್ರಿಯ ಕೋರ್ಸ್‌ಗಳು: ಕಂಪ್ಯೂಟರ್‌ ಸೈನ್ಸ್‌, ಇನ್ಫಾರ್ಮೇಷನ್‌ ಸೈನ್ಸ್‌ ಅಂಡ್​ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಅಂಡ್​ ಕಮ್ಯುನಿಕೇಷನ್ಸ್‌, ಮೆಕ್ಯಾನಿಕಲ್‌, ಸಿವಿಲ್‌, ಎಲೆಕ್ಟ್ರಿಕಲ್‌ ಅಂಡ್​ ಎಲೆಕ್ಟ್ರಾನಿಕ್ಸ್‌.

ಡಿಮ್ಯಾಂಡ್‌ ಇಲ್ಲದ ಕೋರ್ಸ್‌ಗಳು: ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ಮ್ಯಾನೇಜ್‌ಮೆಂಟ್‌, ಬಯೋ ಟೆಕ್ನಾಲಜಿ, ಕೆಮಿಕಲ್‌ ಎಂಜಿನಿಯರಿಂಗ್‌, ಏರೋನ್ಯಾಟಿಕಲ್‌ ಎಂಜಿನಿಯರಿಂಗ್‌, ಟೆಲಿಕಮ್ಯುನಿಕೇಷನ್‌.

ತಜ್ಞರ ಪ್ರಕಾರ, ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಆದ್ಯತೆ ನೀಡದಿರಲು ಪ್ರಮುಖ ಕಾರಣವೆಂದರೆ ಉದ್ಯೋಗಾವಕಾಶಗಳ ಕೊರತೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸೀಟು ಆಯ್ಕೆ ಮಾಡುವಾಗ ಆದ್ಯತೆಯ ವಿಷಯವೆಂದರೆ ಪ್ಲೇಸ್‌ಮೆಂಟ್‌ ಮತ್ತು ಕ್ಯಾಂಪಸ್‌ ನೇಮಕಾತಿಗಳ ಮೂಲಕ ವಿದ್ಯಾರ್ಥಿಗಳನ್ನು ಇರಿಸುವಲ್ಲಿ ಸರ್ಕಾರಿ ಕಾಲೇಜುಗಳು ಹಿಂದುಳಿದಿವೆ ಎಂದು ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ಹಿರಿಯ ಅಧ್ಯಾಪಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಎಐಸಿಟಿಇ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ದೇಶಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮಂಜೂರಾದ ಸೀಟುಗಳಲ್ಲಿ ಕನಿಷ್ಠ 35-40 ಪ್ರತಿಶತದಷ್ಟು ಸೀಟುಗಳು ಪ್ರತಿ ವರ್ಷ ಹಾಗೆಯೇ ಖಾಲಿ ಉಳಿಯುತ್ತಿವೆಯಂತೆ, ಅವುಗಳಲ್ಲಿ ಹೆಚ್ಚಿನವು ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳಲ್ಲಿ ಇರುವ ಇಂಜಿನಿಯರ್ ಕಾಲೇಜುಗಳಲ್ಲಿ ಅಂತೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಪೂರ್ವ ವರ್ಷಗಳಲ್ಲಿ ಖಾಲಿಯಾದ ಸೀಟುಗಳ ಪಾಲು ಇನ್ನೂ ಹೆಚ್ಚಾಗಿದೆ. 2018-19 ರಲ್ಲಿ ಕ್ರಮವಾಗಿ 48.56 ಪ್ರತಿಶತ ಮತ್ತು 2017-18 ರಲ್ಲಿ 49.14 ಪ್ರತಿಶತದಷ್ಟು ಸೀಟುಗಳು ಹಾಗೆಯೇ ಖಾಲಿ ಉಳಿದಿವೆಯಂತೆ. ಅಂಕಿ - ಅಂಶಗಳ ಪ್ರಕಾರ, ಈ ಸಂಸ್ಥೆಗಳ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ, ಪ್ರತಿ ವರ್ಷ ಕೋರ್ಸ್ ಅನ್ನು ಉತ್ತೀರ್ಣಗೊಳಿಸುವವರ ಸಂಖ್ಯೆಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2021-22 ರಲ್ಲಿ ಉತ್ತಮ ಕ್ಯಾಂಪಸ್ ನೇಮಕಾತಿಗಳು ಕಂಡು ಬಂದಿದ್ದರೂ, ಈ ಸಂಖ್ಯೆಗಳು ಕಡಿಮೆಯಾಗಿವೆ.

2021-22ರಲ್ಲಿ 4,92,915 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ 4,28,437 ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್ಮೆಂಟ್ ಪಡೆದಿದ್ದಾರೆ. ಇನ್ನೂ 2020-21ರಲ್ಲಿ 5,85,985 ಮಂದಿ ಉತ್ತೀರ್ಣರಾಗಿರುವವರ ಪೈಕಿ ಕೇವಲ 3,69,394 ವಿದ್ಯಾರ್ಥಿಗಳು ಮಾತ್ರ ಕ್ಯಾಂಪಸ್ ಪ್ಲೇಸ್ಮೆಂಟ್ ಪಡೆದಿದ್ದಾರೆ. ಉದ್ಯೋಗ ಸಿಗದೇ ಇರುವುದು ಸಹ ವಿದ್ಯಾರ್ಥಿಗಳ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕಲಾವಿದ ಮಂಜುನಾಥ ಹಿರೇಮಠರಿಂದ ವಂದೇ ಭಾರತ ರೈಲಿನ ಮಾದರಿ ಕಲಾಕೃತಿ ತಯಾರಿ - ವಿಡಿಯೋ

Last Updated : Jun 27, 2023, 1:27 PM IST

ABOUT THE AUTHOR

...view details