ಬೆಂಗಳೂರು: ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾವಕಾಶಕ್ಕೆ ಕೊನೆಯ ದಿನಾಂಕವನ್ನು ಸುಪ್ರೀಂಕೋರ್ಟ್ ನವೆಂಬರ್ 30ರವರೆಗೆ ವಿಸ್ತರಿಸಿದೆ. ಎಐಸಿಟಿಇ ನಿಗದಿ ಮಾಡಿದ್ದ ದಿನಾಂಕದ ಪ್ರಕಾರ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಾತಿಗೆ ಅಕ್ಟೋಬರ್ 25 ಕೊನೆಯ ದಿನವಾಗಿತ್ತು.
ವಿದ್ಯಾರ್ಥಿಗಳ ಅನುಕೂಲತೆ ದೃಷ್ಟಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈ ದಿನಾಂಕವನ್ನು ವಿಸ್ತರಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮನವಿ ಪುರಸ್ಕರಿಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅಡ್ಮಿಶನ್ಗೆ ಹೆಚ್ಚಿನ ಕಾಲಾವಕಾಶ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.