ಬೆಂಗಳೂರು:ಬ್ಲಾಕ್ಮೇಲ್ಗೆ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ಮಾತು ನಂಬಿ ವಿಡಿಯೋ ಕಾಲ್ನಲ್ಲಿ ಬೆತ್ತಲಾಗಿದ್ದ ಇಂಜಿನಿಯರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆಲ ದಿನಗಳ ಹಿಂದೆಯಷ್ಟೇ ಸೈಬರ್ ಕ್ರಿಮಿಗಳ ಬ್ಲಾಕ್ಮೇಲ್ನಿಂದ ವೈದ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಯುವತಿ ಸೋಗಿನಲ್ಲಿ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡ್ತಿದ್ದ ಭೂಪಾಲ್ ಮೂಲದ ಸಾರ್ಥಕ್ ಎಂಬಾತನನ್ನು ಬಂಧಿಸಲಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ. ಈ ಬಾರಿ ಇಂಜಿನಿಯರ್ ರೋಹಿತ್ ಎಂಬುವವರು ಬ್ಲಾಕ್ಮೇಲ್ ಭೂತಕ್ಕೆ ಬಲಿಯಾಗಿದ್ದಾನೆ.
ನಗ್ನ ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ:ವೃತ್ತಿಯಲ್ಲಿ ಮೃತ ರೋಹಿತ್ ಇಂಜಿನಿಯರ್ ಆಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ರೋಹಿತ್ಗೆ ಯುವತಿಯೋರ್ವಳು ಪರಿಚಯವಾಗಿದ್ದಾಳೆ. ಕಾಲ ಕಳೆದಂತೆ ಆಕೆಯ ಜೊತೆ ಸಲುಗೆಯಿಂದ ಮಾತನಾಡಲು ಆರಂಭಿಸಿದ್ದನು. ಆತ್ಮೀಯತೆ ಬೆಳೆಯುತ್ತಿದ್ದಂತೆ ವಿಡಿಯೋ ಕಾಲ್ ಮಾಡಿ ಗಂಟೆಗಟ್ಟಲೇ ಮಾತನಾಡುತ್ತಿದ್ದನು. ಇಷ್ಟಾಗಿದ್ದರೆ ಪರವಾಗಿರಲಿಲ್ಲ. ಆದರೆ ಅಲ್ಲಿ ಆಗಿದ್ದೇ ಬೇರೆ. ದಿನಕಳೆದಂತೆ ಇವರ ವಿಡಿಯೋ ಕಾಲ್ ಮಾತುಕತೆ ವಿಪರೀತವಾಗಿದೆ. ಹೀಗಿರುವವಾಗ ಯುವತಿ ರೋಹಿತ್ನನ್ನು ಬೆತ್ತಲಾಗುವಂತೆ ಉತ್ತೇಜಿಸಿದ್ದಾಳೆ. ಆಕೆಯ ಮಾತು ನಂಬಿದ ಈತ, ಹೇಳಿದಂತೆಲ್ಲ ಮಾಡಿದ್ದಾನೆ. ಆದ್ರೆ ನಂತರ ಆತ ಊಹೆಯೂ ಮಾಡಲಾರದಂತಹ ಶಾಕ್ ಕಾದಿತ್ತು.
ಇನ್ಸ್ಟಾಗ್ರಾಮ್ನಲ್ಲಿ ಈತನ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಯುವತಿ, ಅದೇ ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಲು ಶುರುಮಾಡಿದ್ದಾಳೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮಾನ ಮರ್ಯಾದೆಗೆ ಅಂಜಿದ ಆತ, ಮಲ್ಲೇಶ್ವರಂನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.