ಬೆಂಗಳೂರು:ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ನೆಂಟಸ್ತಿಕೆ ಬೆಳೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಎಂ.ಬಿ. ಪಾಟೀಲ್ ಮತ್ತು ಆಶಾ ಪಾಟೀಲ್ ಅವರ ಪುತ್ರ ಬಸನಗೌಡ ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಅವರ ದ್ವಿತೀಯ ಪುತ್ರ ಕೈಗಾರಿಕೋದ್ಯಮಿ ಗಣೇಶ್ ಅವರ ಪುತ್ರಿ ಅಖಿಲ ಶಾಮನೂರ್ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡು ಬಾವಿ ವಧು -ವರರಿಗೆ ಹಾರೈಸಿದರು.
ನೆಂಟಸ್ಥಿಕೆ ಬೆಳೆಸಿದ ಶಾಮನೂರು ಹಾಗೂ ಎಂಬಿ ಪಾಟೀಲ್ ಕುಟುಂಬ ಸಮಾರಂಭದಲ್ಲಿ ಹಲವು ಗಣ್ಯರು ಭಾಗಿ :ನಿಶ್ಚಿತಾರ್ಥ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಪತ್ನಿ ಪ್ರಭ ಮಲ್ಲಿಕಾರ್ಜುನ್, ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಮತ್ತಿತರರು ಪಾಲ್ಗೊಂಡಿದ್ದರು. ಲಿಂಗಾಯಿತ ಸಮುದಾಯಕ್ಕೆ ಸೇರಿದ ಎಂ.ಬಿ. ಪಾಟೀಲ್ ಕುಟುಂಬ ವೀರಶೈವ ಲಿಂಗಾಯಿತ ಕುಟುಂಬಕ್ಕೆ ಸೇರಿರುವ ಶಾಮನೂರು ಶಿವಶಂಕರಪ್ಪನವರ ಕುಟುಂಬದ ಜತೆ ಸಂಬಂಧ ಬೆಸೆದಿದ್ದು ವಿಶೇಷ.
ಇಬ್ಬರೂ ನಾಯಕರು ಕಾಂಗ್ರೆಸ್ನಲ್ಲಿ ಅತ್ಯಂತ ಹಿರಿಯ ನಾಯಕರಾಗಿದ್ದು, ಸಚಿವರಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡೂ ಕುಟುಂಬ ನಡುವೆ ಸಂಬಂಧ ಬೆಸೆದಿರುವುದು ವಿಶೇಷವಾಗಿದ್ದು, ಕಾಂಗ್ರೆಸ್ ಪಕ್ಷದಲ್ಲೇ ಇದ್ದರೂ ಇಬ್ಬರೂ ನಾಯಕರ ನಿಲುವು ಭಿನ್ನವಾಗಿದೆ.
ಕಾಂಗ್ರೆಸ್ ನಾಯಕರಾದರೂ ಭಿನ್ನ ನಿಲುವುಗಳು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಇಳಿಯುವ ಸಂದರ್ಭ ಲಿಂಗಾಯಿತ ಪ್ರತ್ಯೇಕ ಧರ್ಮ ಸ್ಥಾಪನೆಯ ಆಸಕ್ತಿ ತೋರಿಸಿದ್ದರು. ಇದರ ಪರವಾಗಿ ಎಂ.ಬಿ. ಪಾಟೀಲ್ ನಿಂತಿದ್ದರು. ಆದರೆ, ಶಾಮನೂರು ಶಿವಶಂಕರಪ್ಪ ಇದಕ್ಕೆ ವಿರುದ್ಧವಾಗಿ ದನಿ ಎತ್ತಿದ್ದರು. ಕಾಂಗ್ರೆಸ್ ಪಕ್ಷ ಪ್ರತ್ಯೇಕ ಧರ್ಮದ ಪರವಾಗಿ ನಿಂತಿದ್ದರೆ, ಶಾಮನೂರು ಶಿವಶಂಕರಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ಧವಾಗಿ ನಿಂತಿದ್ದರು.
ಒಟ್ಟಾರೆ ಇತ್ತೀಚಿನವರೆಗೂ ಇಬ್ಬರೂ ನಾಯಕರು ತಮ್ಮ ಅಭಿಪ್ರಾಯಕ್ಕೆ ಬದ್ಧವಾಗಿದ್ದರು. ಇದೀಗ ಎರಡೂ ಕುಟುಂಬದ ನಡುವೆ ಬೀಗತನ ಉಂಟಾಗಿದೆ. ನಿನ್ನೆ ನಿಶ್ಚಿತಾರ್ಥ ನೆರವೇರಿದ್ದು, ವಿವಾಹ ದಿನಾಂಕ ಇನ್ನೂ ನಿಗದಿಯಾಗಬೇಕಿದೆ. ಮುಂದಿನ ವಿಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ. ಪಾಟೀಲ್ ಅತ್ಯಂತ ಗಂಭೀರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕಿದೆ.
ನಿನ್ನೆ ನಿಶ್ಚಿತಾರ್ಥಕ್ಕೆ ತೆರಳುವ ಮುನ್ನವೂ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಹಿರಿಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವಿವಾಹ ಸಂಬಂಧ ಎರಡು ಕುಟುಂಬಗಳ ನಡುವಿನ ಬಾಂಧವ್ಯ ಇನ್ನಷ್ಟೂ ಹೆಚ್ಚಲಿದೆ. ಕಾಂಗ್ರೆಸ್ ಪಕ್ಷದಲ್ಲಿ ವಿಜಯಪುರದಲ್ಲಿ ಎಂ.ಬಿ. ಪಾಟೀಲ್ ಜನಪ್ರಿಯರಾಗಿದ್ದರೆ, ಶಾಮನೂರು ಶಿವಶಂಕರಪ್ಪ ದಾವಣಗೆರೆ ಭಾಗದಲ್ಲಿ ಹೆಸರುವಾಸಿಯಾಗಿದ್ದಾರೆ. ಒಟ್ಟಾರೆ ರಾಜಕೀಯ ಒತ್ತಡದ ಮಧ್ಯದಲ್ಲೇ ನಿಶ್ಚಿತಾರ್ಥ ನಡೆದಿದ್ದು, ಚುನಾವಣೆ ಬಳಿಕ ವಿವಾಹ ನೆರವೇರುವ ಸಾಧ್ಯತೆ ಇದೆ.
ಇದನ್ನೂ ಓದಿ :ಬಾಗಲಕೋಟೆ: ದಾಖಲೆಯ 14 ಲಕ್ಷ ರೂಪಾಯಿಗೆ ಮಾರಾಟವಾದ ಎತ್ತು