ಬೆಂಗಳೂರು: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಸಿರುವ 21 ದಿನಗಳ ಪಾದಯಾತ್ರೆ ಫೆಬ್ರವರಿ 3 ಕ್ಕೆ ನಗರದಲ್ಲಿ ಮುಕ್ತಾಯವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಫೆಬ್ರವರಿ 7 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಹತ್ತು ಲಕ್ಷ ಕುರುಬ ಸಮುದಾಯದವರು ಸೇರಲಿದ್ದಾರೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿ ತಿಳಿಸಿದರು.
ನಿರೀಕ್ಷೆಗೂ ಮೀರಿ 15- 20 ಸಾವಿರ ಜನ ಪಾದಯಾತ್ರೆಯನ್ನು ಸ್ವಾಗತಿಸಿದ್ದಾರೆ. ಮುಸಲ್ಮಾನ ಸಮಾಜದ ದರ್ಗಾದಲ್ಲಿಯೂ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತುಮಕೂರಲ್ಲಿ ವೀರಶೈವ ಮಠದಲ್ಲಿಯೂ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ಸೋಸಲೆ ಮಠದ ಸ್ವಾಮೀಜಿಯವರಿಂದಲೂ ದೇಣಿಗೆ ಸಿಕ್ಕಿದ್ದು, ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಕೊಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದರು.
ಮಾಜಿ ಸಚಿವ ಹೆಚ್. ವಿಶ್ವನಾಥ್ ಮಾತನಾಡಿ, ಕುರುಬ ಸಮಾಜಕ್ಕೆ ಎಸ್.ಟಿ ಮೀಸಲಾತಿ ನೀಡುವುದು ರಾಜಕೀಯ ಅಜೆಂಡವಲ್ಲ. ಇದು ಸಮುದಾಯದ ಅಜೆಂಡಾ. ಇಂತಹ ವಿಭಿನ್ನ ಸಮುದಾಯಕ್ಕೆ ಸರ್ಕಾರ ರಕ್ಷಣೆ ಕೊಡಬೇಕು, ಸೌಲಭ್ಯ ಕೊಡಬೇಕು. ಆದರೆ, ಬೀದಿಗೆ ಬಂದು ಹೋರಾಟ ಮಾಡಬೇಕಿದೆ. ಸ್ವಾಮಿಗಳ ನಾಯಕತ್ವದಲ್ಲಿ, ಜನ ನಾಯಕರ ಮೂಲಕ ಜನರ ಕೂಗನ್ನು ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಮೂಲೆ ಮೂಲೆಗೆ ಈ ವಿಚಾರ ತಿಳಿಸಲು ಈ ಪಾದಯಾತ್ರೆ ನಡೆಸಲಾಗಿದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ಎಸ್ಟಿ ಮೀಸಲಾತಿ ಹೋರಾಟ ಇಂದು ನಿನ್ನೆಯದ್ದಲ್ಲ. ನೂರಾರು ವರ್ಷದಿಂದ ಕೇಳಿಕೊಂಡು ಬಂದಿದ್ದೇವೆ. ನಮ್ಮ ಸಮಾಜಕ್ಕೆ ಎಸ್ಟಿ ಮೀಸಲಾತಿ ಅನಿವಾರ್ಯವಾಗಿದೆ. ಬ್ರಿಟಿಷರ ಕಾಲದಿಂದಲೂ ದಕ್ಷಿಣ ಭಾರತದ ಕುರುಬರಿಗೆ ಬುಡಕಟ್ಟು ಜನಾಂಗದವರೆಂಬ ಇತಿಹಾಸ ಇದೆ. ಈ ಸವಲತ್ತು ಸರ್ಕಾರ ಯಾವತ್ತೋ ಕೊಡಬೇಕಿತ್ತು. ಏಳನೇ ತಾರೀಖಿನಂದು ಸಮಾವೇಶಕ್ಕೆ ಎಲ್ಲ ಕುರುಬ ಸಮಾಜದವರು ಒಂದಾಗಿ, ಕೇಂದ್ರ, ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಬೇಕು ಎಂದರು.