ಬೆಂಗಳೂರು: ಕಳೆದ ಒಂದು ವಾರ ಸುರಿದ ಭಾರಿ ಮಳೆಗೆ ಬೆಂಗಳೂರು ಕೆರೆಯಾಗಿ ಮಾರ್ಪಟ್ಟಿತು. ಇದಕ್ಕೆ ಮುಖ್ಯ ಕಾರಣ ರಾಜಕಾಲುವೆ ಒತ್ತುವರಿ ಎಂದು ಹೇಳಿ ಅಧಿಕಾರಿಗಳು ಜಾರಿಕೊಂಡರು. ಸಿಎಂ ಸಿಟಿ ರೌಂಡ್ಸ್ ಮಾಡಿ ಎಲ್ಲಿ ರಾಜಕಾಲುವೆ ಒತ್ತುವರಿ ಆಗಿದೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು ಎಂದು ಆದೇಶ ಮಾಡಿದರು. ಆದರೆ ಈಗ ತೆರವು ಕಾರ್ಯಾಚರಣೆಯಲ್ಲಿ ಮೃದು ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಮಹದೇವಪುರದಲ್ಲಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು. ಅದು ಕಾಂಪೌಂಡ್ ಮತ್ತು ಖಾಲಿ ಜಾಗಕ್ಕೆ ಮಾತ್ರ ಸೀಮಿತವಾಗಿದೆ. ಮುಂಬರುವ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಜನರ ಕೆಂಗಣ್ಣಿಗೆ ಗುರಿಯಾಗಬಹುದು ಎಂದು ತಿಳಿದು, ಕೆಲವು ಕಡೆ ಮಾತ್ರ ಕಾಂಪೌಂಡ್ಗಳನ್ನು ತೆರವು ಮಾಡಲಾಗುತ್ತಿದೆ ಎನ್ನಲಾಗ್ತಿದೆ.
ಚಲ್ಲಘಟ್ಟದಲ್ಲಿ ಅಡ್ಡವಾಗಿ ನಿರ್ಮಾಣ ಮಾಡಿದ ಒಂದೇ ಒಂದು ಕಟ್ಟಡವನ್ನು ಮಾತ್ರ ಕೆಡವಲಾಗಿದೆ. ಉಳಿದ ಕಡೆ ಕಾಂಪೌಂಡ್ ಗೋಡೆ, ಸಜ್ಜೆ, ಖಾಲಿ ಜಾಗ, ಮೈದಾನಗಳನ್ನು, ರಾಜಕಾಲುವೆಗಳಿಗೆ ಅಡ್ಡಲಾಗಿ ಕಟ್ಟಲಾದ ಗೋಡೆಗಳನ್ನು ಮಾತ್ರ ಉರುಳಿಸಲಾಗುತ್ತಿದೆ.
ಒತ್ತುವರಿ ತೆರವು ಕಾರ್ಯಾಚರಣೆ ಕಳೆದ ಎರಡು ದಿನಗಳಿಂದ ಮಹದೇವಪುರದ ಹತ್ತಾರು ಕಡೆ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗಿದೆ. ಪಾಪಯ್ಯ ಲೇಔಟ್ ಒತ್ತುವರಿ ಸಂಪೂರ್ಣವಾಗಿ ಮುಗಿದಿದೆ. ಚಲ್ಲಘಟ್ಟದಲ್ಲಿ ಶೇ. 50 ರಷ್ಟು, ಶಾಂತಿನಿಕೇತನ ಲೇಔಟ್ನಲ್ಲಿ ಶೇ.25 ರಷ್ಟು, ವಾಗ್ದೇವಿ ಲೇಔಟ್ನಲ್ಲಿ ಶೇ. 25 ರಷ್ಟು ತೆರವು ಬಾಕಿ ಇದೆ ಎಂದು ಮಹದೇವಪುರ ವಲಯದ ಜಂಟಿ ಆಯುಕ್ತ ಚಲಪತಿ ತಿಳಿಸಿದ್ದಾರೆ.
ಇದನ್ನೂ ಓದಿ:ಮುಲಾಜಿಲ್ಲದೇ ರಾಜಕಾಲುವೆ ಒತ್ತುವರಿ ತೆರವು, ಸಮಗ್ರ ಅಭಿವೃದ್ಧಿಗೆ ಒತ್ತು: ಸಿಎಂ ಬಸವರಾಜ ಬೊಮ್ಮಾಯಿ