ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಇಂದು 5 ಕಡೆ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಮಾರತಹಳ್ಳಿ ಪೊಲೀಸ್ ಠಾಣೆ, ಕಾಡುಬೀಸನಹಳ್ಳಿ ಜಲಮಂಡಳಿಯ ಎಸ್‌ಟಿಪಿ ಸ್ಥಳದಲ್ಲಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಆರ್ಸಿಸಿ ಸೇತುವೆಯ ತೆರವು ಕಾರ್ಯಾಚರಣೆಯು ನಡೆಯುತ್ತಿದೆ ಎಂದು ಪಾಲಿಕೆ ತಿಳಿಸಿದೆ.
ಗರುಡಾಚಾರಪಾಳ್ಯ ಕೆರೆಯ ಬಳಿಯಿರುವ ಅಪಾರ್ಟ್ಮೆಂಟ್ನ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ. ಪೂರ್ವ ಪಾರ್ಕ್ ರಿಡ್ಜ್ ನ ಹಿಂಭಾಗ ರಾಜಕಾಲುವೆಯ ಮೇಲಿದ್ದ ಶೆಡ್ ಹಾಗೂ ರಾಜಕಾಲುವೆ ಮೇಲೆ ನಿರ್ಮಿಸಿದ್ದ ರಸ್ತೆ ತೆರವು ಮಾಡಲಾಗಿದೆ.
ಗ್ರೀನ್ ವುಡ್ ರೆಸಿಡೆನ್ಸಿ ಆವರಣದಲ್ಲಿ ಸುಮಾರು 150 ಮೀಟರ್ ಉದ್ದದ ರಾಜಕಾಲುವೆ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ತೆರವು ಕಾರ್ಯ ನಡೆಯುತ್ತಿದೆ. ಅಲ್ಲದೆ ಸಲಾರ್ ಪುರಿಯ ಆವರಣದಲ್ಲಿ ಡ್ರೈನ್ ಕಾಮಗಾರಿ ನಡಸಬೇಕಿದ್ದು, ಕಾಮಗಾರಿ ನಡೆಸಿದ ನಂತರ ಸಲ್ಲಾರ್ ಪುರಿಯ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗುತ್ತದೆ ಎಂದು ಹೇಳಿದೆ.
ವಿಪ್ರೋ ಅವರ ಕ್ಯಾಂಪಸ್‌ನ ಒಳಭಾಗದಲ್ಲಿ ಸರ್ವೇ ಪ್ರಕಾರ ಕಾಲುವೆ ಅಗಲ 2. 4 ಮೀ ಇದ್ದು, ಕಾಲುವೆಯ ಮೇಲೆ ಏನನ್ನೂ ನಿರ್ಮಿಸಿಲ್ಲ. ಆದರೆ, ಕಾಲುವೆಯನ್ನು ಸ್ಲ್ಯಾಬ್ ನಿಂದ ಮುಚ್ಚಲಾಗಿದ್ದು, ಪಾಲಿಕೆಯ ಮೇಲ್ವಿಚಾರಣೆಯಲ್ಲಿ ಅದನ್ನು ತೆರವುಗೊಳಿಸಲಾಗುತ್ತಿದೆ.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾಡುಗೋಡಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ರಾಜಕಾಲುವೆಯ ಎರಡೂ ಬದಿಯಲ್ಲಿ ಸುಮಾರು 75 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಹಾಗೂ 2 ಶೆಡ್ ಗಳ ತೆರವು ಮಾಡಲಾಗಿದೆ. ರಾಜಕಾಲುವೆ ಮೇಲೆ ವಾಸಿಸುವ ಜನರಿಂದ 10 ಮನೆಗಳ ಪೈಕಿ 8 ಮನೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದೆ.
ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಕೆ: ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆಯು ಪಾಲಿಕೆ ಅಧಿಕಾರಿಗಳು, ಭೂಮಾಪಕ ಇಲಾಖೆಯ ಸರ್ವೇಯರ್ ಗಳು, ಕಂದಾಯ ಇಲಾಖೆಯ ತಹಶೀಲ್ದಾರರು, ಮಾರ್ಷಲ್ಗಳು, ಪೊಲೀಸ್ ಸಿಬ್ಬಂದಿಯ ಭದ್ರತೆಯೊಂದಿಗೆ ನಡೆಯುತ್ತಿದ್ದು, ನಾಳೆಯೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ.
ಓದಿ:ಮೇಲಧಿಕಾರಿಗಳ ಕಿರುಕುಳದಿಂದ 5 ಮಂದಿ ಸಾರಿಗೆ ನೌಕರರು ಆತ್ಮಹತ್ಯೆ: ಚಂದ್ರಶೇಖರ್