ಬೆಂಗಳೂರು: ದೇಶದಲ್ಲೇ ಪ್ರತ್ಯೇಕ ತೋಟಗಾರಿಕಾ ಇಲಾಖೆಯನ್ನು ಹೊಂದಿದ ಮೊದಲ ರಾಜ್ಯ ಎಂದರೆ ಅದು ಕರ್ನಾಟಕ. ನಂತರದ ವರ್ಷಗಳಲ್ಲಿ ಇತರ ರಾಜ್ಯಗಳು ಕರ್ನಾಟಕದ ಮಾದರಿಯನ್ನು ಅನುಸರಿಸಿದವು. ಹಾಗಾಗಿ ರಾಜ್ಯ ತೋಟಗಾರಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.
ತೋಟಗಾರಿಕಾ ರಂಗದಲ್ಲಿ ಕರ್ನಾಟಕ ರಾಜ್ಯವು, ದೇಶದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ತೋಟಗಾರಿಕೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಜನರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಪೌಷ್ಟಿಕ ಆಹಾರ, ಆರ್ಥಿಕ ಆದಾಯ, ನಿರಂತರ ಉದ್ಯೋಗ, ವಿವಿಧ ರೀತಿಯ ಸಂಸ್ಕರಣೆ ಮತ್ತು ಉದ್ಯಮಿಗಳಿಗೆ ಕಚ್ಚಾ ಸಾಮಗ್ರಿಗಳ ಪೂರೈಕೆ, ಗುಣಮಟ್ಟದ ಉತ್ಪನ್ನಗಳು ಉತ್ಪಾದನೆ ಪರಿಸರವನ್ನು ಒದಗಿಸುತ್ತದೆ.
ತೋಟಗಾರಿಕಾ ಬೆಳೆಗಳು: ತೆಂಗು, ಅಡಿಕೆ, ಗೇರು, ಸಾಂಬಾರು ಬೆಳೆಗಳಾದ ಕರಿಮೆಣಸು, ಶುಂಠಿ, ಅರಿಶಿನ, ಹಣ್ಣಿನ ಬೆಳೆಗಳಾದ ಮಾವು, ಬಾಳೆ, ಚಿಕ್ಕು, ಪಪ್ಪಾಯಿ, ದ್ರಾಕ್ಷಿ, ದಾಳಿಂಬೆ, ಕಿತ್ತಳೆ, ಮೋಸಂಬಿ, ಕರಬೂಜ, ಅನಾನಸ್, ಕಲ್ಲಂಗಡಿ, ನೇರಳೆ ಹಣ್ಣು, ಸ್ಟ್ರಾಬರಿ, ಹಲಸಿನಹಣ್ಣು ಅಂಜೂರದ ಹಣ್ಣುಗಳು. ತರಕಾರಿ ಬೆಳೆಗಳಾದ ಕ್ಯಾರೆಟ್, ಬೀಟ್ರೂಟ್, ಹೂಕೋಸು, ಎಲೆಕೋಸ್, ಬೀನ್ಸ್ , ಟೊಮೆಟೊ, ಆಲೂಗಡ್ಡೆ, ಬದನೇಕಾಯಿ, ಈರುಳ್ಳಿ, ಹಸಿ ಮೆಣಸಿನಕಾಯಿ, ನುಗ್ಗೇಕಾಯಿ, ಸೊಪ್ಪುಗಳನ್ನು ಬೆಳೆಸಲಾಗುತ್ತದೆ. ಜೊತೆಗೆ ವಿವಿಧ ಮಾದರಿಯ ಹೂಗಳು.
ರೈತರಿಗಾಗಿ ಪರಿಹಾರದ ಯೋಜನೆಗಳು:ಪ್ರಕೃತಿ ವಿಕೋಪ ಮತ್ತು ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಿ ಸರ್ಕಾರಿ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಸಾಲ ನೀಡಿದ ಸಂಸ್ಥೆಗಳಿಂದ ಪಡೆದ ಸಾಲವನ್ನು ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡರೇ, ರೈತನ ಕುಟುಂಬಕ್ಕೆ ಒಂದು ಲಕ್ಷ ಸಹಾಯಧನ ಒದಗಿಸಲಾಗುತ್ತದೆ. ಕೃಷಿ ಸಂಬಂಧಿತ ಕೆಲಸ ಮಾಡುವಾಗ ಆಕಸ್ಮಿಕವಾಗಿ ನಿಧನರಾದರೆ ರೈತರು ಹಾಗೂ ಕೃಷಿ ಕಾರ್ಮಿಕ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಸಿಗುತ್ತದೆ. ಬೆಂಕಿ ಅನಾಹುತಗಳಿಂದ ಹುಲ್ಲು ಮೆದೆ ಬಣವೆಗಳ ನಷ್ಟದಲ್ಲಿ 10 ಸಾವಿರ ರೂ. ಪರಿಹಾರ ಸಿಗುತ್ತದೆ.
ಇತರೆ ಸೌಲಭ್ಯಗಳು: ಬಡ್ಡಿ ರಹಿತ ಬೆಳೆ ಸಾಲ ಯೋಜನೆ, ರಾಷ್ಟ್ರೀಯ ಕೃಷಿ ವಿಮಾ ಯೋಜನೆ, ಜಿಲ್ಲಾವಲಯ ಸಾವಯವ ಗೊಬ್ಬರ ಯೋಜನೆ, ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದ ಯೋಜನೆಗಳು, ಭೂಚೇತನ ಯೋಜನೆಯಡಿ ಮಣ್ಣು ಪರೀಕ್ಷೆ ಮತ್ತು ಪೋಷಕಾಂಶ, ಮಳೆ ನೀರು ನಿರ್ವಹಣೆ, ಸುಧಾರಿತ ತಳಿಗಳು, ತಾಂತ್ರಿಕತೆ ಇತ್ಯಾದಿಗಳ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತದೆ.
ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ಧನ:ರೈತರ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರ. ಹೆಚ್ಚಿನ ಸಂಪರ್ಕಕ್ಕಾಗಿ ಕೃಷಿ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಕಚೇರಿಗಳಿಗೆ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಇಲಾಖೆಯು 2019- 20 ನೇ ಸಾಲಿನ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿತ್ತು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ, ಗ್ರಾಮೀಣ ಉದ್ಯೋಗ ಖಾತರಿ, ಗೇರು, ತೆಂಗು ಅಭಿವೃದ್ಧಿ, ನೀರಿನ ಟ್ಯಾಂಕರ್ ಖರೀದಿ, ಜೇನು ಸಾಕಣೆ ಯೋಜನೆಗಳಡಿ ಸಹಾಯಧನ ನೀಡಲಾಗುತ್ತದೆ.