ಬೆಂಗಳೂರು :108 ಆ್ಯಂಬುಲೆನ್ಸ್ ಸೇವೆ ಒದಗಿಸುವ ಖಾಸಗಿ ಸಂಸ್ಥೆ EMRIಯ ಗುತ್ತಿಗೆ ಮುಂದುವರೆಸುವ ಕುರಿತಂತೆ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಹೈಕೋರ್ಟ್, ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಾಜ್ಯದ ಜನತೆಗೆ ತುರ್ತು ಆರೋಗ್ಯ ಸೇವೆ ಒದಗಿಸುವ ಇಎಂಆರ್‌ಐ ಸಂಸ್ಥೆ, ರಾಜ್ಯ ಸರ್ಕಾರದ ಒಡಂಬಡಿಕೆ ಷರತ್ತು ಉಲ್ಲಂಘಿಸಿದೆ ಎಂದು ಆರೋಪಿಸಿ ಹಾವೇರಿ ಜಿಲ್ಲೆಯ ಮಾರುತಿ ಬಣಕಾರ ಹಾಗೂ ಇತರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವತ್ತು ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತು.
ಒಪ್ಪಂದದ ಷರತ್ತುಗಳಂತೆ ತುರ್ತುಸೇವೆಗಳನ್ನು ಒದಗಿಸುವಲ್ಲಿ ಇಎಂಆರ್‌ಐ ಸಂಸ್ಥೆ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವಧಿ ಮೀರಿ ಅನಧಿಕೃತವಾಗಿ ಸೇವೆ ಮುಂದುವರಿಸಲಾಗಿದೆ. ಇಲ್ಲಿ ನೇರವಾಗಿ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ದೂರಿದ್ದರು.
108 ಆ್ಯಂಬುಲೆನ್ಸ್ ಸೇವೆ ಬಗ್ಗೆ ರಾಜ್ಯ ಸರ್ಕಾರ ಹಾಗೂ ಇಎಂಆರ್‌ಐ ನಡುವೆ 2008ರ ಆಗಸ್ಟ್ 14ರಂದು 10 ವರ್ಷಗಳ ಕಾಲಾವಧಿಗೆ ಒಪ್ಪಂದ ಆಗಿತ್ತು. ಈ ಬಗ್ಗೆ ಸೂಕ್ತ ತನಿಖೆಗೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದನ್ಯಾಯಾಲಯ ಅವಧಿ ಮುಗಿದರೂ ಏಕೆ ಸೇವೆ ಮುಂದುವರೆಸುತ್ತಿದ್ದೀರಾ? ಇದರ ಬಗ್ಗೆ ನಿಮ್ಮ ನಿಲುವೇನು? ಎಂದು ನ್ಯಾಯಮೂರ್ತಿಗಳು ಸರ್ಕಾರಿ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಜೂನ್ 27 ರಂದು ನಿಲುವು ಸ್ಪಷ್ಟಪಡಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದರು.