ಕರ್ನಾಟಕ

karnataka

ETV Bharat / state

ಖಾಸಗಿ ಸಂಸ್ಥೆಗಳಲ್ಲಿ ಸಿ & ಡಿ ದರ್ಜೆಯ ಉದ್ಯೋಗ ಕನ್ನಡಿಗರಿಗೆ ಮೀಸಲು: ಆದೇಶ ಜಾರಿಗೆ ಸರ್ಕಾರದ ಚಿಂತನೆ - ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ

ರಾಜ್ಯ ಸರ್ಕಾರದ ಯಾವುದೇ ವಿನಾಯಿತಿ ಪಡೆಯದ ಖಾಸಗಿ ಸಂಸ್ಥೆಗಳಲ್ಲೂ ಸಿ ಮತ್ತು ಡಿ ವೃಂದದಲ್ಲಿ ಎಲ್ಲಾ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡುವ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

J. C. Madhu Swamy
ಜೆ.ಸಿ ಮಾಧುಸ್ವಾಮಿ

By

Published : Sep 24, 2020, 12:07 PM IST

ಬೆಂಗಳೂರು: ರಾಜ್ಯ ಸರ್ಕಾರದ ಯಾವುದೇ ವಿನಾಯಿತಿ ಪಡೆಯದ ಖಾಸಗಿ ಸಂಸ್ಥೆಗಳಲ್ಲೂ ಸಿ ಮತ್ತು ಡಿ ವೃಂದದಲ್ಲಿ ಎಲ್ಲಾ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡುವ ಕುರಿತು ಆದೇಶ ಜಾರಿಗೊಳಿಸುವ ಚಿಂತನೆಯಲ್ಲಿ ಸರ್ಕಾರ ಇದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಪರಿಷತ್​ನಲ್ಲಿ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಸಲಹೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡುವಂತೆ ಹಾಲಿ ಇರುವ ಆದೇಶವನ್ನು ಖಾಸಗಿ ಸಂಸ್ಥೆಗಳಿಗೆ ಅನ್ವಯಿಸುವಂತೆ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ. ಸ್ಥಳೀಯರಿಗೆ ಉದ್ಯೋಗ ನೀಡುವ ಆಂಧ್ರಪ್ರದೇಶ ಮಾದರಿಯ ಕಾಯ್ದೆಯನ್ನು ಜಾರಿಗೆ ತರಲು ನಾವು ಅಧ್ಯಯನ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವಿಧಾನಪರಿಷತ್ ನಲ್ಲಿ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ವಯ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸದನದಲ್ಲಿ ಮಂಡಿಸಬೇಕು ಎಂದು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದರು. ಈ ಸಂಬಂಧ ನಡೆದ ಚರ್ಚೆ ವೇಳೆ ಮಾಧುಸ್ವಾಮಿ ಉತ್ತರ ನೀಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದಿಂದ ಸವಲತ್ತು ಅಥವಾ ರಿಯಾಯಿತಿ ಪಡೆದಿರುವ ಎಲ್ಲಾ ಖಾಸಗಿ ಸಂಸ್ಥೆಗಳು ತಮ್ಮಲ್ಲಿನ ಸಿ ಮತ್ತು ಡಿ ವೃಂದದಲ್ಲಿನ ಎಲ್ಲ ಉದ್ಯೋಗವನ್ನು ಕನ್ನಡಿಗರಿಗೆ ನೀಡಬೇಕೆಂಬ ಆದೇಶ ಹೊರಡಿಸಲಾಗಿದೆ. ಅಲ್ಲದೆ ಇಲ್ಲಿನ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಕೂಡ ಸೂಚಿಸಲಾಗಿದೆ. ಅಸಂಘಟಿತ ವಲಯಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಯಾವುದೇ ವರದಿಗಳು ಸದ್ಯಕ್ಕೆ ಇಲ್ಲ. ಆದ್ದರಿಂದ ಆ ವಲಯದ ಬಗ್ಗೆ ನಾವು ಇದುವರೆಗೂ ಯಾವುದೇ ಕ್ರಮವನ್ನು ಕೂಡ ಕೈಗೊಂಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ವಿಧಾನಪರಿಷತ್​ನಲ್ಲಿ ಕನ್ನಡಿಗರು ಹಾಗೂ ಕನ್ನಡಿಗರಿಗೆ ಉದ್ಯೋಗ ದೊರಕಿಸುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಯಿತು.

ABOUT THE AUTHOR

...view details