ಬೆಂಗಳೂರು:ಪ್ರಸ್ತುತ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ನೀಡಿದ್ದ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯ ಗುರಿಯನ್ನು ರಾಜ್ಯ ಡಿಸೆಂಬರ್ ತಿಂಗಳಿನಲ್ಲಿಯೇ ಪೂರ್ಣಗೊಳಿಸಲು ಮಹಿಳೆಯರು ಮಹತ್ವ ಕೊಡುಗೆ ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಅತ್ಯುತ್ತಮ ಮಹಿಳಾ ಕಾಯಕ ಬಂಧುಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಗೌರವ ಸಮಾರಂಭದಲ್ಲಿ ಮಹಿಳೆಯರನ್ನು ಸನ್ಮಾನಿಸಲಾಯಿತು. ರಾಜ್ಯ ಮತ್ತು ರಾಷ್ಟ್ರದಲ್ಲಿ ನರೇಗಾದಿಂದ ಉದ್ಯೋಗ ಹಾಗೂ ದೇಶದ ಆಸ್ತಿ ಜಾಸ್ತಿಯಾಗುತ್ತಿದೆ. ರೈತರ ಭೂಮಿ ಫಲವತತ್ತೆಯಾಗುವ ನಿಟ್ಟಿನಲ್ಲಿ ಕೃಷಿ ಅಭಿವೃದ್ಧಿಪಡಿಸಿ, ಉತ್ಪಾದಕ ವ್ಯವಸ್ಥೆ ತರುವ ಮಾರ್ಗದಲ್ಲಿ ಇಡೀ ದೇಶದಲ್ಲಿ ಕ್ರಾಂತಿಯಾಗುತ್ತಿದೆ. ಈ ಕಾರ್ಯದಲ್ಲಿ ಮಹಿಳೆಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ನಲ್ಲಿ ಅವಕಾಶ ನೀಡಲಾಗುತ್ತಿದೆ. ಸ್ತ್ರೀಶಕ್ತಿ ಸಂಘಗಳು ಮಹಿಳೆಯರಿಗೆ ಉದ್ಯೋಗ ಕೊಡಿಸಲು ಅವಕಾಶ ಕಲ್ಪಿಸುತ್ತಿವೆ ಎಂದರು.
15.27 ಕೋಟಿ ಮಾನವ ದಿನಗಳ ಪೂರೈಕೆ:ಈ ವರ್ಷ ಒಟ್ಟಾರೆ ಪರಿಷ್ಕೃತ 16 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯ ಗುರಿಯಲ್ಲಿ ಈತನಕ 15.27 ಕೋಟಿ ಮಾನವ ಉದ್ಯೋಗ ಕಲ್ಪಿಸಲಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
30.81 ಲಕ್ಷ ಮಹಿಳೆಯರಿಗೆ ಉದ್ಯೋಗ:ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ 30.81 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ. ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿ 2,400ಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳಿಗೆ ಪೂರ್ಣ ಪ್ರಮಾಣದಲ್ಲಿ ಗ್ರಾಮ ಕಾಯಕ ಮಿತ್ರರೆಂದು ನೇಮಕ ಮಾಡಲಾಗಿದೆ. ಈ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ವಿಶೇಷ ಮಹಿಳಾ ಕಾಯಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.