ಬೆಂಗಳೂರು : ಆಗಸ್ಟ್ 2 ರಿಂದ (ಬುಧವಾರ) ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್ ಮಾಡಲು ರಾಜ್ಯ ಡಯಾಲಿಸಿಸ್ ನೌಕರರ ಸಂಘ ನಿರ್ಧರಿಸಿದೆ. ಇದರಿಂದಾಗಿ ಡಯಾಲಿಸಿಸ್ ರೋಗಿಗಳಿಗೆ ಆಪತ್ತು ಉಂಟಾಗುವ ಆತಂಕ ಶುರುವಾಗಿದೆ.ಕಳೆದ ಎರಡು ವರ್ಷಗಳಿಂದ ಸರಿಯಾದ ವೇತನ ನೀಡದಿರುವುದು ಹಾಗೂ ಕೆಲ ಸೌಲಭ್ಯಗಳನ್ನು ನೀಡದ ಹಿನ್ನೆಲೆ, ರಾಜ್ಯಾದ್ಯಂತ ಡಯಾಲಿಸಿಸ್ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಯಾಲಿಸಿಸ್ ಘಟಕದ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿರುವುದರಿಂದ ರಾಜ್ಯದ ಹಲವು ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ರೋಗಿಗಳು ತೀವ್ರ ಪರದಾಡುವಂತಹ ಪರಿಸ್ಥಿತಿ ಎದುರಾಗಲಿದೆ. ಪ್ರತಿಭಟನೆ ಹಿನ್ನೆಲೆ ಜಿಲ್ಲಾ ಕೇಂದ್ರಗಳಿಂದ ಡಯಾಲಿಸಿಸ್ ಘಟಕದ ಸಿಬ್ಬಂದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಡಯಾಲಿಸಿಸ್ ಮಾಡುವವರು ಇಲ್ಲದೆ ರೋಗಿಗಳು ನರಳುವಂತಾಗಲಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಪ್ರತಿಭಟನೆ : ರಾಜ್ಯದ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಒಟ್ಟು 167 ಡಯಾಲಿಸಿಸ್ ಕೇಂದ್ರಗಳಿದ್ದು, 1 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ ಡಯಾಲಿಸಿಸ್ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಆರ್‌ಎಸ್ ಮತ್ತು ಸಂಜೀವಿನಿ ಸಂಸ್ಥೆಗಳ ಅಡಿಯಲ್ಲಿ ಕೆಲಸ ಮಾಡುತ್ತಿರುವ ಡಯಾಲಿಸಿಸ್ ನೌಕರರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು.
ಕಳೆದ ತಿಂಗಳು ಕೂಡ ಪ್ರತಿಭಟನೆಗೆ ಮುಂದಾಗಿದ್ದ ಸಿಬ್ಬಂದಿ: ಈ ಹಿಂದೆ ಕೂಡ ರಾಜ್ಯಾದ್ಯಂತ ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ಸ್ಥಗಿತಗೊಳ್ಳುವ ಆತಂಕ ತಾತ್ಕಾಲಿಕವಾಗಿ ದೂರವಾಗಿತ್ತು. ಡಯಾಲಿಸಿಸ್ ಹೊಣೆ ಹೊತ್ತ ಸಂಜೀವಿನಿ ಸಂಸ್ಥೆಯ ಸಿಬ್ಬಂದಿ ಸರ್ಕಾರದ ಸಕಾಲಿಕ ಮಧ್ಯಪ್ರವೇಶದಿಂದ ಜೂನ್. 26ರಿಂದ ಪ್ರತಿಭಟನೆಗೆ ಮುಂದಾದವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.