ಬೆಂಗಳೂರು: ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಹೊರರಾಜ್ಯದ ವ್ಯಕ್ತಿಯೊಬ್ಬ ಮಾಲೀಕ ಇಲ್ಲದ ಸಮಯದಲ್ಲಿ ಅಂಗಡಿಯಲ್ಲಿದ್ದ 30 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಗಣೇಶ್ ಎಂಬಾತ ಹಣದೊಂದಿಗೆ ಪರಾರಿಯಾಗಿದ್ದಾನೆ. ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜಯಚಂದ್ರ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ: ಶನಿವಾರ, ರವಿವಾರ ಬಸ್ ಸಂಚಾರ ವಿರಳ
ಬಿವಿಕೆ ಐಯ್ಯಂಗಾರ್ ರಸ್ತೆಯ ಮುರುದಾರ್ ಎನ್ನುವ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಆರೋಪಿ ಕಳೆದ ಏಳೆಂಟು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಅಂಗಡಿ ಮಾಲೀಕ ಜಯಚಂದ್ರ ಅಂಗಡಿಯಲ್ಲಿ 30 ಲಕ್ಷ ರೂ. ನಗದು ಇರಿಸಿದ್ದರು. ಡಿಸೆಂಬರ್ 21ರಂದು ಅಂಗಡಿಯಲ್ಲಿ ಮಾಲೀಕ ಇಲ್ಲದ ಸಮಯ ನೋಡಿಕೊಂಡು ಆರೋಪಿ ಗಣೇಶ್ 30 ಲಕ್ಷ ರೂ. ಕದ್ದು ಪರಾರಿಯಾಗಿದ್ದಾನೆ. ಬಳಿಕ ಅಂಗಡಿಗೆ ಬಂದ ಮಾಲೀಕ, ಗಣೇಶ್ ಹೊರಹೋಗಿದ್ದು, ವಾಪಸ್ ಬರಬಹುದು ಎಂದುಕೊಂಡಿದ್ದರು. ಆದರೆ, ಒಂದು ವಾರ ಕಳೆದರೂ ಆರೋಪಿ ಸಂಪರ್ಕಕ್ಕೂ ಸಿಕ್ಕಿಲ್ಲ. ಹೀಗಾಗಿ ಅನುಮಾನಗೊಂಡು ಅಂಗಡಿಯಲ್ಲಿ ಇರಿಸಿದ್ದ ಹಣ ನೋಡಿಕೊಂಡಾಗ ಹಣ ಇಲ್ಲದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಮಾಲೀಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಒಂದು ಪೊಲೀಸ್ ತಂಡ ಆರೋಪಿಯ ಜಾಡು ಹಿಡಿದು ರಾಜಸ್ಥಾನಕ್ಕೂ ತೆರಳಿದೆ. ಈ ಸಂಬಂಧ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.