ಕರ್ನಾಟಕ

karnataka

ನೌಕರನ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂದು ಬಡ್ತಿಯಿಂದ ವಂಚಿಸಲಾಗದು: ಹೈಕೋರ್ಟ್

By ETV Bharat Karnataka Team

Published : Oct 18, 2023, 10:50 AM IST

''ಸರ್ಕಾರಿ ಉದ್ಯೋಗಿಯ ಮೇಲೆ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎನ್ನುವ ಕಾರಣಕ್ಕೆ ಬಡ್ತಿಯಿಂದ ವಂಚಿಸಲಾಗದು'' ಎಂದು ಹೈಕೋರ್ಟ್ ತಿಳಿಸಿದೆ.

High Court
ನೌಕರನ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂದು ಬಡ್ತಿಯಿಂದ ವಂಚಿಸಲಾಗದು: ಹೈಕೋರ್ಟ್

ಬೆಂಗಳೂರು:ಸರ್ಕಾರಿ ನೌಕರನ ವಿರುದ್ಧದ ಆರೋಪ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೂ ಕ್ರಿಮಿನಲ್‌ ಪ್ರಕರಣ ವಿಚಾರಣೆ ಬಾಕಿಯಿದೆ ಎಂಬ ಕಾರಣ ನೀಡಿ ಬಡ್ತಿಯಿಂದ ವಂಚಿಸಲಾಗದು ಎಂದು ಹೈಕೋರ್ಟ್‌ ಆದೇಶಿಸಿದೆ.

ಕ್ರಿಮಿನಲ್‌ ಪ್ರಕರಣ ಬಾಕಿಯಿರುವ ಕಾರಣಕ್ಕೆ ತಮಗೆ ಬಡ್ತಿ ನಿರಾಕರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಧಾರವಾಡದ ತಹಶೀಲ್ದಾರ್‌ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಜಯಶ್ರೀ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಆರ್. ಕೃಷ್ಣ ಕುಮಾರ್‌ ಮತ್ತು ಜಿ. ಬಸವರಾಜ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ತಮಗೆ ಬಡ್ತಿ ನೀಡುವಂತೆ ಕೋರಿ ಜಯಶ್ರೀ ಅವರು 2022ರ ಜು.5ರಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಧಾರವಾಡ ಜಿಲ್ಲಾಧಿಕಾರಿ ನೀಡಿದ್ದ ಹಿಂಬರಹವನ್ನು ಮತ್ತು ಅದನ್ನು ಎತ್ತಿಹಿಡಿದ ಕೆಎಟಿ ಆದೇಶವನ್ನು ರದ್ದುಪಡಿಸಿದೆ. ಜೊತೆಗೆ, ಮುಂದಿನ ಮೂರು ತಿಂಗಳ ಒಳಗೆ ಎಲ್ಲಾ ಸರ್ಕಾರಿ ಸೌಲಭ್ಯಗಳೊಂದಿಗೆ ಅರ್ಜಿದಾರರನ್ನು ಪ್ರಥಮ ದರ್ಜೆ ಸಹಾಯಕರು ಹಾಗೂ ಕಂದಾಯ ಇನ್​ಸ್ಪೆಕ್ಟರ್​ ಹುದ್ದೆಗೆ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಪ್ರಕರಣದ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ವಾದ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠ, ಡಿಪಿಸಿ ಸಭೆ ನಡೆಯುವ ದಿನಾಂಕದಂದು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ ಮತ್ತು ದೋಷಾರೋಪಗಳ ಕಲಂ ಹೊರಡಿಸಿದ್ದರೆ, ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಆರೋಪಿ ಸರ್ಕಾರಿ ಅಧಿಕಾರಿಗೆ ಬಡ್ತಿ ನಿರಾಕರಿಸುವ ಅಥವಾ ಮುಚ್ಚಿದ ಲಕೋಟೆ ಪ್ರಕ್ರಿಯೆ ಅನುಸರಿಸಬೇಕು.

ಈ ವಿಚಾರವನ್ನು ಸ್ಪಷ್ಟಪಡಿಸಿ 1993ರ ಜು.14ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಪ್ರಕರಣದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ 2021ರ ಡಿ.20ರಂದು ಡಿಪಿಸಿ ಸಭೆ ನಡೆದಿದೆ. ಅಂದಿಗೆ ಅರ್ಜಿದಾರೆಯ ವಿರುದ್ಧ ಯಾವುದೇ ದೋಷಾರೋಪ ಪಟ್ಟಿ ಅಥವಾ ದೋಷಾರೋಪಣೆ ಕಲಂಗಳನ್ನು ನೀಡಿರಲಿಲ್ಲ. 2022ರ ಫೆ.1ರಂದು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಾಗಾಗಿ, 2021ರ ಡಿ.20ರಂದು ನಡೆದ ಡಿಪಿಸಿ ಸಭೆಯಲ್ಲಿ ಅರ್ಜಿದಾರರಿಗೆ ಬಡ್ತಿ ನಿರಾಕರಿಸುವ ಅಥವಾ ಮುಚ್ಚಿದ ಲಕೋಟ ಪ್ರಕ್ರಿಯೆ ಅನುಸರಿಸುವ ಅವಶ್ಯಕತೆಯೇ ಉದ್ಭವಿಸಿರುವುದಿಲ್ಲ. ಹಾಗಾಗಿ, ಕೆಎಟಿ ಆದೇಶವನ್ನು ರದ್ದುಪಡಿಸಲು ಅರ್ಹವಾಗಿದೆ ಎಂದು ತೀರ್ಮಾನಿಸಿತು.

ಪ್ರಕರಣದ ಹಿನ್ನೆಲೆ ಏನು?:ಧಾರವಾಡ ತಹಶೀಲ್ದಾರ್‌ ಕಚೇರಿಯಲ್ಲಿ ಜಯಶ್ರೀ ಅವರು 2005ರ ಮಾ.16ರಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ 2017ರಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಅರ್ಜಿದಾರೆ ಸೇರಿದಂತೆ ಇತರರಿಗೆ ಬಡ್ತಿ ನೀಡುವ ವಿಚಾರವಾಗಿ 2021ರ ಡಿ.20ರಂದು ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆ ನಡೆದಿತ್ತು. ಅರ್ಜಿದಾರೆಯ ವಿರುದ್ಧ ಕ್ರಿಮಿನಲ್‌ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ಅವರಿಗೆ ಬಡ್ತಿ ನೀಡಲು ನಿರಾಕರಿಸಲಾಗಿತ್ತು.

ಇದರಿಂದ ಜಯಶ್ರೀ, 2022ರ ಮೇ 13ರಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ತಮಗೆ ಬಡ್ತಿ ನೀಡಲು ಕೋರಿದ್ದರು. ಅದನ್ನು ಆ ಮನವಿಯನ್ನು ತಿರಸ್ಕರಿಸಿ ಧಾರವಾಡ ಜಿಲ್ಲಾಧಿಕಾರಿ 2022ರ ಜು.5ರಂದು ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಜಯಶ್ರೀ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿ ಕೆಎಟಿ, 2023ರ ಮಾ.30ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲರ ವಾದ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಬಾಕಿಯಿರುವುದು ಸರ್ಕಾರಿ ನೌಕರನಿಗೆ ಬಡ್ತಿ ನೀಡದಿರುವುದಕ್ಕೆ ಆಧಾರವಾಗುವುದಿಲ್ಲ. 1993ರ ಮಾ.14ರಂದು ಖುದ್ದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿ, ಡಿಪಿಸಿ ಸಭೆ ನಡೆಯುವ ದಿನದಂದು ಸರ್ಕಾರಿ ನೌಕರನ ವಿರುದ್ಧದ ಬಾಕಿಯಿರುವ ಕ್ರಿಮಿನಲ್‌ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಅಥವಾ ದೋಷಾರೋಪಗಳ ಕಲಂ (ಆರ್ಟಿಕಲ್ಸ್‌ ಆಫ್‌ ಚಾರ್ಜೆಸ್‌) ನೀಡದಿದ್ದ ಪಕ್ಷದಲ್ಲಿ ಕೇವಲ ಕ್ರಿಮಿನಲ್‌ ಪ್ರಕರಣ ಬಾಕಿಯಿದೆ ಎಂಬ ಮಾತ್ರಕ್ಕೆ ಬಡ್ತಿ ನಿರಾಕರಿಸಬಾರದು. ಮುಚ್ಚಿದ ಲಕೋಟೆ ಪ್ರಕ್ರಿಯೆ (ಬಡ್ತಿ ನಿರ್ಣಯವನ್ನು ಮುಚ್ಚಿದ ಲಕೋಟೆಯಲ್ಲಿ ಇಡುವ) ಅನುಸರಿಸಬಾರದು ಎಂದು ಸ್ಪಷ್ಟಪಡಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಅಲ್ಲದೆ, ದೋಷಾರೋಪ ಪಟ್ಟಿ ಸಲ್ಲಿಸಿದ ಅಥವಾ ದೋರೋಪಗಳ ಕಲಂ ನೀಡಿದ ನಂತರ ಮುಚ್ಚಿಟದ ಲಕೋಟೆ ಪ್ರಕ್ರಿಯೆ ವಿಧಾನವನ್ನು ಅಳವಡಿಸಬೇಕಾಗುತ್ತದೆ. ಸರ್ಕಾರದ ಆದೇಶ ಮತ್ತು ಈ ವಿಚಾರದಲ್ಲಿ ನ್ಯಾಯಾಲಯಗಳು ತೀರ್ಪು ಹೊರಡಿಸಿದ್ದರೂ ತಮಗೆ ಬಡ್ತಿ ನಿರಾಕರಿಸಲಾಗಿದೆ. ಈ ವಿಚಾರವನ್ನು ಕೆಎಟಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಪ್ರತಿಯಾಗಿ ಸರ್ಕಾರಿ ವಕೀಲರು, ಕೆಎಟಿ ಆದೇಶವನ್ನು ಸಮರ್ಥಿಸಿಕೊಂಡಿದ್ದರು ಹಾಗೂ ಅರ್ಜಿಯಲ್ಲಿ ಯಾವುದೇ ಮರಿಟ್‌ ಇರದ ಕಾರಣ ವಜಾಗೊಳಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ:ಬೆಳಗಾವಿ ಅಬಕಾರಿ ಅಧಿಕಾರಿಗಳ ಭರ್ಜರಿ ಬೇಟೆ.. ಲಾರಿಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 10 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ

ABOUT THE AUTHOR

...view details