ಬೆಂಗಳೂರು: ರಾಜ್ಯ ಪರಿಸರ ಮಾಲಿನ್ಯ ಮಂಡಳಿ ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು ಹಾಗೂ ಉದ್ದಿಮೆಗಳಿಂದಾಗುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಾಲಿನ್ಯ ತಪಾಸಣೆ ಮಾಡಲು 3 ತುರ್ತು ಸ್ಪಂದನ ವಾಹನಗಳನ್ನು ನಿಯೋಜನೆ ಮಾಡಿದೆ. ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ್ ವಿಧಾನಸೌಧದ ಆವರಣದಲ್ಲಿ ತುರ್ತು ಸ್ಪಂದನ ವಾಹನಗಳಿಗೆ ಚಾಲನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನದಿಯ ಕಣಿವೆ ಪ್ರದೇಶದಲ್ಲಿ ಮಾಲಿನ್ಯ ತಡೆಗಟ್ಟುವಂತೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಬೆಂಗಳೂರು ನಗರದಲ್ಲಿ ವೃಷಭಾವತಿ ಕಣಿವೆ ಸೇರಿದಂತೆ ಇತರೆಡೆ ಅಧಿಕ ಪ್ರಮಾಣದಲ್ಲಿ ಕೈಗಾರಿಕೆ ತ್ಯಾಜ್ಯದಿಂದ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಸಹ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳೆದ 8 ತಿಂಗಳಿಂದ ಶಾಶ್ವತ ಅಧ್ಯಕ್ಷರಿಂದ ಅವರನ್ನು ಸಹ ತ್ವರಿತವಾಗಿ ನೇಮಕ ಮಾಡಬೇಕಾಗಿದೆ ಎಂದರು.
ತುರ್ತು ಸ್ಪಂದನೆ ವಾಹನಗಳ ಕಾರ್ಯವೈಖರಿ ಹೇಗೆ?:ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯ ತಡೆಗಟ್ಟಲು ದ್ರವ ತ್ಯಾಜ್ಯ ಸಂಸ್ಕರಣಾ ಘಟಕಗಳು, ಸಾಮಾನ್ಯ ತ್ಯಾಜ್ಯ ಘಟಕಗಳು ಮತ್ತು ಕೈಗಾರಿಕೆ ತಪಾಸಣೆ ಕಾರ್ಯ ಮಾಡಲು ಅಧಿಕಾರಿಗಳ ತಂಡವನ್ನು ರಚಿಸಿದ್ದು, ಈ ಅಧಿಕಾರಿಗಳು ತುರ್ತು ಸ್ಪಂದನ ವಾಹನಗಳ ಮೂಲಕ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಮಾಲಿನ್ಯ ತಡೆಗಟ್ಟಲು ಅಭಿಯಾನವನ್ನು ಆಯೋಜಿಸಲಾಗಿದೆ.