ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ರಾಜಧಾನಿಯಲ್ಲಿನ ಪ್ರಯಾಣಿಕರ ಸಂಖ್ಯೆ, ನಗರಕ್ಕೆ ನಿತ್ಯ ಲಕ್ಷಾಂತರ ಪ್ರಯಾಣಿಕರ ಆಗಮನ. ಜನಸಂಖ್ಯೆ ಹೆಚ್ಚಿದಂತೆ ವಾಹನಗಳಿಂದ ಉಂಟಾಗುವ ಮಾಲಿನ್ಯವೂ ಹೆಚ್ಚಾಗುತ್ತಲೇ ಇದೆ. ಮುಖ್ಯವಾಗಿ ಬಸ್ಗಳಿಂದ ಶೇಕಡಾ 6 ರಷ್ಟು ಮಾಲಿನ್ಯ ಹೊರಸೂಸುತ್ತಿದೆ. ಇದಕ್ಕೆ ಬ್ರೆಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಫೇಮ್ ಸ್ಕೀಮ್ 2 ಯೋಜನೆ ಅಡಿಯಲ್ಲಿ ಇ-ಬಸ್ (ಎಲೆಕ್ಟ್ರಾನಿಕ್ ಬಸ್) ರಸ್ತೆಗೆ ಇಳಿಯಲಿವೆ.
ಬೆಂಗಳೂರಿನಲ್ಲಿ ರಸ್ತೆಗಿಳಿಯಲಿವೆ ಎಲೆಕ್ಟ್ರಾನಿಕ್ ಬಸ್ಗಳು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸೋಕ್ಕೆ ಸಜ್ಜಾಗಿದ್ದು, ರಾಜ್ಯ ಸರ್ಕಾರದ ಅನುಮತಿಯೊಂದೇ ಬಾಕಿ ಉಳಿದಿದೆ. ಬರೋಬ್ಬರಿ 300 ಎಲೆಕ್ಟ್ರಿಕ್ ಬಸ್ಗಳು ಸಜ್ಜಾಗಿವೆ.
ಚಾರ್ಜಿಂಗ್ ಪಾಯಿಂಟ್ ಎಲ್ಲಿ: ರಸ್ತೆಗೆ ಇಳಿಯುವ ಎಲೆಕ್ಟ್ರಿಕ್ ವಾಹನಗಳಿಗೆ ಬಿಎಂಟಿಸಿ ಡಿಪೋದಲ್ಲಿ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗುವುದು. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಪ್ರಸಾದ್ ತಿಳಿಸಿದರು.
ವೋಲ್ವೋ ಬಸ್ಗಳಿಂದ ನಷ್ಟಕ್ಕೆ ತುತ್ತಾಗಿರೋ ನಗರ ಸಾರಿಗೆ ಸಂಸ್ಥೆಯು, ಅವುಗಳ ಜಾಗದಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ನಿಲ್ಲಿಸಲು ಯೋಜನೆ ರೂಪಿಸಿದೆ. ಈಗಾಗಲೇ ಬಿಎಂಟಿಸಿ ಬೋರ್ಡ್ ಅನುಮೋದನೆ ಕೊಟ್ಟಿದ್ದು, ಸರ್ಕಾರ ಆದೇಶ ನೀಡಿದ ಕೂಡಲೇ ಕಾರ್ಯೋನ್ಮುಖರಾಗುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಹೆಚ್ಚುತ್ತಿರುವ ಬೆಂಗಳೂರಿನ ಮಾಲಿನ್ಯಕ್ಕೆ ಎಲೆಕ್ಟ್ರಿಕ್ ಬಸ್ಗಳ ಯೋಜನೆ ಬ್ರೇಕ್ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.