ಕರ್ನಾಟಕ

karnataka

ETV Bharat / state

'ನವರಾತ್ರಿಗೆ ಕರೆಂಟ್ ಶಾಕ್'?: ಸರ್ಕಾರಕ್ಕೆ ಹೆಚ್​ಡಿ ಕುಮಾರಸ್ವಾಮಿ ತರಾಟೆ - ವಿದ್ಯುತ್‌ ದರ ಏರಿಕೆ

ವಿದ್ಯುತ್‌ ದರ ಏರಿಕೆ ಪ್ರಸ್ತಾಪ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

HD Kumaraswamy
ಹೆಚ್.ಡಿ ಕುಮಾರಸ್ವಾಮಿ

By

Published : Sep 24, 2022, 11:59 AM IST

ಬೆಂಗಳೂರು:ವಿಧಾನ ಮಂಡಲ ಅಧಿವೇಶನ ಮುಂದೂಡಿಕೆಯಾದ ಕೂಡಲೇ ವಿದ್ಯುತ್‌ ದರ ಏರಿಕೆ ಆಗಿದೆ! ಏನೀ ಹುನ್ನಾರ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನವರಾತ್ರಿಗೆ ಹಬ್ಬದ ಶುಭಾಶಯ ಹೇಳಬೇಕಿದ್ದ ಸರ್ಕಾರ, ಕರೆಂಟ್‌ ಶಾಕ್ ಕೊಟ್ಟು ಜನರು ಕಂಗೆಡುವಂತೆ ಮಾಡಿದೆ.‌ ಪ್ರತಿ ಯೂನಿಟ್​​ʼಗೆ 24 ರಿಂದ 43 ಪೈಸೆ ಹೆಚ್ಚಿಸಿರುವುದು ಅವೈಜ್ಞಾನಿಕ, ಅನಪೇಕ್ಷಿತ ಮತ್ತು ಖಂಡನೀಯ ಎಂದಿದ್ದಾರೆ.

ಇಂಧನ ಹೊಂದಾಣಿಕೆ ಶುಲ್ಕದ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್‌ ದರ ಏರಿಸಿದೆ. ಕಳೆದ ಜುಲೈನಲ್ಲಿ ಬರೆ ಎಳೆದಿತ್ತು. ಈಗ ಮತ್ತೆ ದರ ಹೆಚ್ಚಿಸಿದೆ. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ವಿದ್ಯುತ್‌ ದರವನ್ನೂ ಏರಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳುವ ಮಾತು ಒಪ್ಪುವ ರೀತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ವಿದ್ಯುತ್‌ ಉತ್ಪಾದನೆ ಉತ್ತಮವಾಗಿದೆ. ಆದರೂ ಖರೀದಿ ವೆಚ್ಚದಲ್ಲಿ 1,244 ಕೋಟಿ ರೂ. ಹೆಚ್ಚಳ ಆಗಿದೆ ಎನ್ನುವ ಲೆಕ್ಕವನ್ನು ನಂಬುವ ರೀತಿಯಲ್ಲಿ ಇಲ್ಲ. ಇಂಧನ ವಲಯದ ಕೆಲ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಎಸ್ಕಾಂಗಳ ಭುಜದ ಮೇಲೆ ಗುಂಡಿಟ್ಟು, ಜನರಿಗೆ ಹೊಡೆಯುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಜನರ ಪರ ಇಲ್ಲ ಎನ್ನುವುದು ಸತ್ಯ. ಜಾಗತಿಕ ಪೇಟೆಯಲ್ಲಿ ಕಚ್ಛಾತೈಲದ ಬೆಲೆ ನಿರಂತರ ಇಳಿದರೂ ದೇಶದಲ್ಲಿ ತೈಲಬೆಲೆ ಇಳಿಸದ ಕೇಂದ್ರದ ಸರ್ಕಾರದ ಹಾದಿಯಲ್ಲೇ ರಾಜ್ಯ ಸರ್ಕಾರವೂ ಸಾಗಿದೆ. ವಿದ್ಯುತ್‌ ದರದ ನಿರಂತರ ಏರಿಕೆ ಬಗ್ಗೆ ಗಂಭೀರ ಅನುಮಾನಗಳಿವೆ ಎಂದು ಹೆಚ್​ಡಿಕೆ ದೂರಿದ್ದಾರೆ.

ವಿದ್ಯುತ್‌ ಸೋರಿಕೆ, ಕಳವು ತಡೆಲಾಗದ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳದ ಬಿಜೆಪಿ ಸರ್ಕಾರ ಅದಕ್ಷತೆಯ ಆಡಂಬೋಲ. 'ಬಡವರನ್ನು ಸುಲಿದು ಬಿಸ್ನೆಸ್‌ ಕ್ಲಾಸಿನ ಜನರ ಜೇಬು ತುಂಬು' ಎನ್ನುವುದು ಬಿಜೆಪಿ ತತ್ತ್ವ. ಅದನ್ನೇ ಕರ್ನಾಟಕದಲ್ಲೂ ಎಗ್ಗಿಲ್ಲದೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಇದನ್ನೂ ಓದಿ:BMS ಟ್ರಸ್ಟ್ ಅಕ್ರಮ ಬಗ್ಗೆ ಪ್ರಧಾನಿ ಮೋದಿಗೆ ದಾಖಲೆ ಸಮೇತ ದೂರು ಕೊಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

ABOUT THE AUTHOR

...view details