ಬೆಂಗಳೂರು:ರಾಜ್ಯ ತೀವ್ರ ಬರದ ಸಂಕಷ್ಟಕ್ಕೆ ಸಿಲುಕಿದೆ. ಜಲಾಶಯಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ವಿದ್ಯುತ್ ಬಳಕೆಯ ಪ್ರಮಾಣ ಗಗನಕ್ಕೇರಿದೆ. ವಿದ್ಯುತ್ ಉತ್ಪಾದನೆ ಕುಸಿತ ಕಂಡಿದ್ದು, ಎಸ್ಕಾಂಗಳಿಂದ ವಿದ್ಯುತ್ ಖರೀದಿ ಪ್ರತಿ ತಿಂಗಳು ಗಣನೀಯವಾಗಿ ಏರಿಕೆಯಾಗುತ್ತಿದೆ.
ಈ ಬಾರಿ ಮಳೆಯ ಕೊರತೆಯಿಂದ ಕರ್ನಾಟಕ ತೀವ್ರ ಬರದ ಕೂಪದಲ್ಲಿ ಸಿಲುಕಿದೆ. ರಾಜ್ಯದ ಸುಮಾರು 195 ತಾಲೂಕುಗಳು ಬರಪೀಡಿತವಾಗಿವೆ. ಪ್ರಮುಖ ಜಲಾಶಯಗಳು ಬತ್ತಿ ಹೋಗಿವೆ. ಇತ್ತ ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲೂ ಭಾರಿ ಕುಸಿತ ಉಂಟಾಗಿದೆ. ಮುಂಗಾರು ಇನ್ನೂ ಮುಗಿದಿಲ್ಲ. ಆಗಲೇ ಜಲಾಶಯಗಳಲ್ಲಿನ ನೀರಿನ ಮಟ್ಟ ತಳಮಟ್ಟಕ್ಕೆ ಹೋಗಿದ್ದು, ಜಲ ವಿದ್ಯುತ್ ಘಟಕಗಳ ಉತ್ಪಾದನಾ ಸಾಮರ್ಥ್ಯವೇ ಕುಸಿತ ಕಂಡಿದೆ. ಹಾಗಾಗಿ ಈ ಸಲ ತೀವ್ರ ವಿದ್ಯುತ್ ಕೊರತೆ ಎದುರಾಗುವುದು ಬಹುತೇಕ ಖಚಿತವಾಗಿದೆ.
ಇನ್ನೊಂದೆಡೆ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ತಾರಕಕ್ಕೇರಿದೆ. ರಾಜ್ಯದಲ್ಲಿ ಸೆ.22ಕ್ಕೆ ಗರಿಷ್ಠ ಸುಮಾರು 14,624 ಮೆ.ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಸೆ.22ಕ್ಕೆ ರಾಜ್ಯದ ವಿದ್ಯುತ್ ಬಳಕೆ 265 ಮಿ.ಯು. ತಲುಪಿತ್ತು. ಕಳೆದ ವರ್ಷ ಇದೇ ಅವಧಿಗೆ 200 ಮಿ.ಯು. ವಿದ್ಯುತ್ ಬಳಕೆ ಆಗಿತ್ತು. ಆರ್ಟಿಪಿಎಸ್ 8 ಘಟಕಗಳ ಪೈಕಿ 5 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಮೂರು ಪ್ರಮುಖ ಜಲಘಟಕಗಳಲ್ಲಿ ಈ ವರ್ಷ ಲಭ್ಯವಿರುವ ವಿದ್ಯುತ್ ಪ್ರಮಾಣ 4,050 ಮಿ.ಯು. ಅದೇ ಕಳೆದ ವರ್ಷ ಈ ಅವಧಿಗೆ ಲಭ್ಯವಿದ್ದ ವಿದ್ಯುತ್ ಪ್ರಮಾಣ 7,338 ಮಿ.ಯು. ಜಲ ವಿದ್ಯುತ್ ಉತ್ಪಾದನೆ ತೀವ್ರ ಕುಸಿತವಾಗಿದ್ದರೆ, ಕಲ್ಲಿದ್ದಲಿನ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ವಿದ್ಯುತ್ ಉತ್ಪಾದನೆಯೂ ಕುಸಿತ ಕಾಣುತ್ತಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
15 ಲಕ್ಷ ಟನ್ ಕಲ್ಲಿದ್ದಲು ಆಮದಿಗೆ ನಿರ್ಧಾರ:ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಕಲ್ಲಿದ್ದಲು ಕೊರತೆ ಇದಕ್ಕೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಜತೆ ನಡೆದ ಸಭೆಯಲ್ಲೂ ಇಂಧನ ಇಲಾಖೆ ಅಧಿಕಾರಿಗಳು ಕಲ್ಲಿದ್ದಲು ಕೊರತೆಯ ಸಮಸ್ಯೆ ಹೇಳಿಕೊಂಡಿದ್ದರು. ಇದೀಗ 15 ಲಕ್ಷ ಟನ್ ಆಮದು ಕಲ್ಲಿದ್ದಲು ಖರೀದಿಗೆ ಸರ್ಕಾರ ನಿರ್ಧಾರ ಮಾಡಿದೆ. ಸದ್ಯಕ್ಕೆ ವೈಟಿಪಿಎಸ್‌ಗೆ (Yeramarus Thermal Power Station) ಆರು ತಿಂಗಳ ಅವಧಿಗೆ 2.50 ಲಕ್ಷ ಟನ್ ಕಲ್ಲಿದ್ದಲು ಆಮದು ಹಾಗೂ ಪೂರೈಕೆಗೆ ಕೆಪಿಸಿಎಲ್ ಟೆಂಡರ್ ಕರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ಏರುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸರ್ಕಾರ ನಿರ್ಧರಿಸಿದೆ.
ಎಸ್ಕಾಂಗಳಿಗೆ ವಿದ್ಯುತ್ ಖರೀದಿ ಹೊರೆ:ಏಪ್ರಿಲ್ 2022ರಲ್ಲಿ ಕೆಇಆರ್ಸಿ (Karnataka Electricity Regulatory Commission) ವಿದ್ಯುತ್ ಶುಲ್ಕ ಆದೇಶದಲ್ಲಿ ಬೆಸ್ಕಾಂಗೆ 20,983.74 ಕೋಟಿ ರೂ.ವೆಚ್ಚದ ವಿದ್ಯುತ್ ಖರೀದಿ ವೆಚ್ಚಕ್ಕೆ ಅನುಮೋದನೆ ನೀಡಿತ್ತು. ಇದೇ ಹಣಕಾಸು ವರ್ಷ 2024 ಪ್ರಸ್ತಾವನೆಯಲ್ಲಿ ಬೆಸ್ಕಾಂ ಕೆಇಆರ್ಸಿ ಮುಂದೆ ಒಟ್ಟು 24,187.36 ಕೋಟಿ ರೂ. ವಿದ್ಯುತ್ ಖರೀದಿಯ ಪ್ರಸ್ತಾವನೆ ಇಟ್ಟಿದೆ.
ಮೆಸ್ಕಾಂಗೆ ಏಪ್ರಿಲ್ 2022ರಲ್ಲಿ ಕೆಇಆರ್ಸಿ ತನ್ನ ವಿದ್ಯುತ್ ಶುಲ್ಕ ಆದೇಶದಲ್ಲಿ 2,810.04 ಕೋಟಿ ರೂ. ವೆಚ್ಚದ ವಿದ್ಯುತ್ ಖರೀದಿಗೆ ಅನುಮೋದನೆ ನೀಡಿತ್ತು. ಇದೇ ಹಣಕಾಸು ವರ್ಷ 2024ರಲ್ಲಿ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಮೆಸ್ಕಾಂ ಅಂದಾಜು ವಿದ್ಯುತ್ ಖರೀದಿ ವೆಚ್ಚ 3,787.41 ಕೋಟಿ ರೂ. ಎಂದು ಉಲ್ಲೇಖಿಸಿದೆ. ಅದೇ ರೀತಿ ಏಪ್ರಿಲ್ 2022ರಲ್ಲಿ ಕೆಇಆರ್ಸಿ ವಿದ್ಯುತ್ ಶುಲ್ಕ ಆದೇಶದಲ್ಲಿ ಚಾಮುಂಡೇಶ್ಚರಿ ವಿದ್ಯುತ್ ಸರಬರಾಜು ಕಂ.(ಚಸ್ಕಾಂ)ಗೆ 4095.73 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಖರೀದಿಗೆ ಅನುಮೋದನೆ ನೀಡಿತ್ತು. ಪ್ರಸಕ್ತ ಹಣಕಾಸು ವರ್ಷ 2024ರ ಚಸ್ಕಾಂ ಸಲ್ಲಿಸಿದ ಪ್ರಸ್ತಾವನೆಯಲ್ಲಿ 4,603.20 ಕೋಟಿ ರೂ. ವೆಚ್ಚದ ವಿದ್ಯುತ್ ಖರೀದಿಯ ಅಂದಾಜಿಸಿದೆ.