ಕರ್ನಾಟಕ

karnataka

ETV Bharat / state

ನೀರಾವರಿ ಪಂಪ್‌ಸೆಟ್​ಗಳಿಗೆ 7ತಾಸು ವಿದ್ಯುತ್​​, ಬೇಸಿಗೆಯಲ್ಲಿ ಪವರ್​ ಸಮಸ್ಯೆ ಇರಲ್ಲ; ಸಚಿವ ಜಾರ್ಜ್​

ಭಾಗ್ಯ, ಕುಟೀರ ಜ್ಯೋತಿ ಯೋಜನೆ 2.64 ಲಕ್ಷ ಬಾಕಿ ಉಳಿಸಿಕೊಂಡಿದ್ದ ಫಲಾನುಭವಿಗಳ ವಿದ್ಯುತ್ ಶುಲ್ಕ 389.66 ಕೋಟಿ ರೂ. ಮನ್ನಾ ಮಾಡಿ, ಗೃಹ ಜ್ಯೋತಿ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.

Energy Minister KJ George addressed the press conference.
ಇಂಧನ ಸಚಿವ ಕೆ ಜೆ ಜಾರ್ಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By ETV Bharat Karnataka Team

Published : Nov 21, 2023, 5:12 PM IST

Updated : Nov 21, 2023, 8:36 PM IST

ಸಚಿವ ಕೆ ಜೆ ಜಾರ್ಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ತೀವ್ರ ಬರದ ನಡುವೆಯೂ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ತಕ್ಕಂತೆ ಪೂರೈಸಲು ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಬೆಸ್ಕಾಂ ಕೇಂದ್ರ ಕಚೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸದ್ಯದ ಅಂಕಿ ಅಂಶದ ಪ್ರಕಾರ ರಾಜ್ಯದ ದೈನಂದಿನ ಬಳಕೆಗೆ ವಿದ್ಯುತ್ ಬೇಡಿಕೆ ಸುಮಾರು 14,000 ಮೆ ವ್ಯಾ ಮತ್ತು ನೀರಾವರಿ ಪಂಪ್‌ಸೆಟ್ ಸೆಟ್​ಗಳಿಗೆ 4,500 ಮೆ.ವ್ಯಾ ವಿದ್ಯುತ್ ಅಗತ್ಯವಿದೆ.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಳದ ಜತೆಗೆ ಸೆಕ್ಷನ್ 11 ಜಾರಿ ಹಾಗೂ ಇತರ ರಾಜ್ಯಗಳಿಂದ ವಿದ್ಯುತ್ ಮತ್ತು ಇಂಧನ ಮಾರುಕಟ್ಟೆಯಿಂದ ಖರೀದಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ನೀರಾವರಿ ಪಂಪ್‌ಸೆಟ್​ಗಳಿಗೆ 7 ತಾಸು ವಿದ್ಯುತ್ ಪೂರೈಸುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಮುಂದಿನ ಬೇಸಿಗೆ ಎದುರಿಸಲು ಇಂಧನ ಇಲಾಖೆ ಸಿದ್ಧತೆ: ಈ ವರ್ಷ ಮಳೆ ಕೊರತೆಯಿಂದಾಗಿ ಇಂಧನ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಯಾರಿಗೂ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ವಿದ್ಯುತ್ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲಾಗುತ್ತಿದೆ. 2024ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಸುಮಾರು 15,500 ಮೆ.ವ್ಯಾ ನಿಂದ 16,500 ಮೆ.ವ್ಯಾ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದರು.

ಉಷ್ಣ ವಿದ್ಯುತ್ ಸ್ಥಾವರದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ:ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಇಂಧನ ಮಾರುಕಟ್ಟೆಯಿಂದ ವಿದ್ಯುತ್ ಸಂಗ್ರಹಣೆ ಮತ್ತು ಪಂಜಾಬ್ (300 ಮೆ.ವ್ಯಾ) ಮತ್ತು ಉತ್ತರ ಪ್ರದೇಶದಿಂದ (100-600ಮೆ.ವ್ಯಾ.) ವಿದ್ಯುತ್ ಖರೀದಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು. ಎಒಹೆಚ್ ಜನರೇಟರ್‌ಗಳನ್ನು ಪುನಾರಂಭಿಸಲಾಗುವುದು. ಕೆಪಿಸಿಎಲ್‌ನ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆಯನ್ನು 3500 ಮೆ.ವ್ಯಾವರೆಗೆ ಹೆಚ್ಚಿಸುವುದು. 370 ಮೆ.ವ್ಯಾ. ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರದಲ್ಲಿ ಶೀಘ್ರ ಉತ್ಪಾದನೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

2 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ಕಲ್ಲಿದ್ದಲು ಲಭ್ಯ:ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ 2023ರ ಅಕ್ಟೋಬರ್‌ನಿಂದ ತಿಂಗಳಿಗೆ 2 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ಕಲ್ಲಿದ್ದಲು ಲಭ್ಯವಾಗುತ್ತಿದೆ. 2023ರ ಡಿಸೆಂಬರ್ 1ರಿಂದ ಕೂಡಿಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ 150 ಮೆ ವ್ಯಾ ಉತ್ಪಾದನೆ ಪುನಾರಂಭಿಸಲಾಗುವುದು. ಥರ್ಮಲ್ ಜನರೇಟರ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ದೇಶಿಯ ಕಲ್ಲಿದ್ದಲಿನೊಂದಿಗೆ ಅಮದು ಕಲ್ಲಿದ್ದಲನ್ನು ಸರಾಸರಿ ಶೇ.10ರಷ್ಟು ಮಿಶ್ರಣ ಮಾಡಲಾಗುವುದು ಎಂದು ಹೇಳಿದರು.

ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಬಾಕಿ ಮನ್ನಾ: ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ 2.64 ಲಕ್ಷ ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ ಶುಲ್ಕ 389.66 ಕೋಟಿ ರೂ. ಮನ್ನಾ ಮಾಡಿ, ಗೃಹ ಜ್ಯೋತಿ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ಜಾರಿಗೊಳಿಸಿರುವ ಗೃಹ ಜ್ಯೋತಿಯ ಲಾಭ ಪಡೆಯಲು ಇದ್ದ ತೊಡಕನ್ನು ನಿವಾರಿಸಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ಬಳಸಲು ಈ ಮೂಲಕ ಅನುಕೂಲ ಮಾಡಿಕೊಡಲಾಗಿದೆ ಎಂದು ವಿವರಿಸಿದರು.

ಕಾಫಿ ಬೆಳೆಗಾರರ ಪಂಪ್‌ಸೆಟ್‌ ಬಡ್ಡಿ ಬಾಕಿ ಮನ್ನಾ: ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ 10 ಹೆಚ್ ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್‌ ಬಿಲ್‌ ಅಸಲು 47.7 ಕೋಟಿ ರೂ. ಮತ್ತು ಬಡ್ಡಿ 16.47 ಕೋಟಿ ರೂ. ಸೇರಿ ಒಟ್ಟು 64.24 ಕೋಟಿ ರೂ. ವರೆಗೆ 2023ರ ಸೆಪ್ಟೆಂಬರ್‌ 30ರ ವರೆಗೆ ಬಾಕಿ ಉಳಿದಿದೆ. ರೈತರು ಅಸಲು ಮೊತ್ತ ಪಾವತಿಸಿದ ನಂತರ ಸಂಚಿತ ಬಡ್ಡಿಯನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದರು.

ರಾಜ್ಯದ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಕ್ರಮ: ಯಲಹಂಕ ಸಂಯೋಜಿತ ಸೈಕಲ್ ಸ್ಥಾವರಕ್ಕೆ (ವೈಸಿಸಿಪಿ) ಅಗತ್ಯ ಗ್ಯಾಸ್ ಪೂರೈಸಿ, 6 ತಿಂಗಳೊಳಗೆ ಕಾರ್ಯಗತಗೊಳಿಸಲು ಸರ್ಕಾರದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (SECI) ದಿಂದ 1100 ಮೆ.ವ್ಯಾ. ಹೈಬ್ರಿಡ್ (ಪವನ, ಸೌರ ಮತ್ತು ಸಂಗ್ರಹಣಾ) ಇಂಧನ ಪಡೆಯಲು ಕ್ರಮ ವಹಿಸಲಾಗಿದೆ.

ಹಸಿರು ಶಕ್ತಿ ಕಾರಿಡಾರ್:ಗ್ರೀನ್‌ ಹೈಡ್ರೋಜನ್‌ ಸಂಬಂಧಿಸಿದ ನವೀಕರಿಸಿದ ಇಂಧನ ಯೋಜನೆಗಳಿಗೆ ಬೃಹತ್ ಪ್ರಮಾಣದ ವಿದ್ಯುತ್ ಪ್ರಸರಣಕ್ಕೆ ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಇಂಧನ ಸಚಿವಾಲಯದ ಮುಂದೆ ಹಸಿರು ಶಕ್ತಿ ಕಾರಿಡಾರ್ (ಜಿಇಸಿ-III) ಪ್ರಸ್ತಾವನೆ ಮಂಡಿಸಲು ರಾಜ್ಯ ಸರ್ಕಾರ ಯೋಜಿಸಿದೆ.

ನೀರಾವರಿ ಪಂಪ್‌ಸೆಟ್‌ಗಳಿಗೆ ಅಗತ್ಯ ಇರುವ ಹೆಚ್ಚುವರಿ ವಿದ್ಯುತ್ ಪೂರೈಸುವ ಉದ್ದೇಶದಿಂದ ರಾಜ್ಯದಲ್ಲಿ ವಿದ್ಯುತ್‌ ಉತ್ಪಾದಿಸುವ ಖಾಸಗಿಯವರು ಹೊರ ರಾಜ್ಯಗಳಿಗೆ ಮಾರಾಟ ಮಾಡದಂತೆ ವಿದ್ಯುತ್ ಕಾಯಿದೆ, 2003ರ ಸೆಕ್ಷನ್ 11 ಜಾರಿಗೊಳಿಸಲಾಗಿದೆ.

ಫೀಡರ್ ಮಟ್ಟದ ಸೌರ ವಿದ್ಯುತ್ ಉತ್ಪಾದನಾ ಸಬ್‌ಸ್ಟೇಷನ್‌ ಮೂಲಕ ಕುಸುಮ್ ಸಿ 1ನೇ ಹಂತದಲ್ಲಿ 1300 ಮೆಗಾವ್ಯಾಟ್ ಮತ್ತು 2 ನೇ ಹಂತದಲ್ಲಿ 1200 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸುವ ಗುರಿ ಇದೆ. ಈಗಾಗಲೇ 768 ಮೆಗಾವ್ಯಾಟ್ ಉತ್ಪಾದನೆಗೆ ಬಿಡ್ ತೆರೆದಿದ್ದು, ಶೀಘ್ರದಲ್ಲಿ ಆದೇಶ ನೀಡಲಾಗುವುದು. ಶರಾವತಿಯಲ್ಲಿ ಕೆಪಿಸಿಎಲ್‌ ಪ್ರಸ್ತಾಪಿಸಿದ 2000 ಮೆಗಾವ್ಯಾಟ್, ಪಂಪ್ಡ್ ಸ್ಟೋರೇಜ್ ಉತ್ಪಾದನಾ ಯೋಜನೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಛತ್ತೀಸ್‌ಗಢದ ಗೋಡ್ನಾದಲ್ಲಿ ಖಾಸಗಿ/ಜಂಟಿ ಸಹಭಾಗಿತ್ವದಲ್ಲಿ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಗಾರಿಕೆಗೆ ರಾಜ್ಯ ಮುಂದಾಗಿದೆ ಎಂದು ಮಾಹಿತಿ ನೀಡಿದರು.

ಟಿಹೆಚ್‌ಡಿಸಿ ಜತೆ ಒಪ್ಪಂದ: ರಾಜ್ಯದಲ್ಲಿ 2500 ಮೆ ವ್ಯಾ ಪಂಪ್ಡ್ ಸ್ಟೋರೇಜ್, ಹೈಡ್ರೋ, ಸೋಲಾರ್ ಸೇರಿದಂತೆ 15,000 ಕೋಟಿ ರೂ. ಮೊತ್ತದ ವಿವಿಧ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಸ್ವಾಮ್ಯದ ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ಜತೆ ರಾಜ್ಯ ಸರ್ಕಾರ ಸಹಿ ಹಾಕಿದೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆ: 2023ರ ನವೆಂಬರ್ ತಿಂಗಳವರೆಗೆ ನೋಂದಣಿ ಮಾಡಿರುವ ಒಟ್ಟು ಗ್ರಾಹಕರು 1.61 ಕೋಟಿ ಪ್ರಯೋಜನ ಪಡೆಯುತ್ತಿರುವ ಗ್ರಾಹಕರು 1.50 ಕೋಟಿ, ತಿಂಗಳಿನ ಒಟ್ಟು ಸಬ್ಸಿಡಿ ಮೊತ್ತ: 780 ಕೋಟಿ ರೂ., ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಸಬ್ಸಿಡಿ (ಮೊತ್ತ ನಾಲ್ಕು ತಿಂಗಳು ಸೇರಿ) 2900 ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂಓದಿ:ಇನ್ಮುಂದೆ ರಾಜ್ಯದೆಲ್ಲೆಡೆ ಕೃಷಿ ಪಂಪ್​ಸೆಟ್​ಗಳಿಗೆ ಏಳು ತಾಸು ನಿರಂತರ ವಿದ್ಯುತ್ ಪೂರೈಕೆ: ಸಿಎಂ ಘೋಷಣೆ

Last Updated : Nov 21, 2023, 8:36 PM IST

ABOUT THE AUTHOR

...view details