ಬೆಂಗಳೂರು:ರಾಜ್ಯದಲ್ಲಿ ಬರದ ಛಾಯೆ ಗಾಢವಾಗಿದ್ದು, ಒಂದೆಡೆ ಜಲಾಶಯಗಳ ನೀರಿನ ಮಟ್ಟ ಇಳಿಕೆಯಾಗಿದೆ. ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಇನ್ನೊಂದೆಡೆ ರಾಜ್ಯದ ವಿದ್ಯುತ್ ಬಳಕೆ ತಾರಕ್ಕೇರಿರುವುದು ಇಂಧನ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಬರದ ಕರಿ ನೆರಳು ದಟ್ಟವಾಗಿ ವ್ಯಾಪಿಸಿದೆ. ಮುಂಗಾರು ಮಳೆ ಕೈ ಕೊಟ್ಟಿದೆ. ವಾಡಿಕೆಯಂತೆ ಜುಲೈ ಹಾಗೂ ಆಗಸ್ಟ್ನಲ್ಲಿ ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತೆ. ಆದರೆ, ಈ ಬಾರಿ ವಾಡಿಕೆ ಮಳೆಯೂ ಕೈಕೊಟ್ಟಿದೆ. ಹೀಗಾಗಿ ರಾಜ್ಯದ ಸುಮಾರು 130ಕ್ಕೂ ಅಧಿಕ ತಾಲೂಕುಗಳು ಬರದ ಅಂಚಿನಲ್ಲಿದೆ. ಈ ಬಾರಿ ಮಳೆರಾಯ ಸಂಪೂರ್ಣ ಕೈಕೊಟ್ಟಿರುವ ಕಾರಣ ರಾಜ್ಯದ ಜಲಾಶಯಗಳು ತಳ ಮುಟ್ಟುವತ್ತ ಸಾಗಿದೆ. ಮಳೆ ಇಲ್ಲದೇ ಜಲಾಶಯಗಳಲ್ಲಿ ನೀರಿನ ಮಟ್ಟ ದಿನೇ ದಿನೆ ಕುಸಿತ ಕಾಣುತ್ತಿದೆ. ಇದರಿಂದ ಜಲ ವಿದ್ಯುತ್ ಘಟಕದಲ್ಲಿ ವಿದ್ಯುತ್ ಉತ್ಪಾದನೆಯೂ ಕುಂಟಿತವಾಗುತ್ತಿದೆ. ಉತ್ಪಾದನೆ, ಬೇಡಿಕೆ, ಬಳಕೆ ಮಧ್ಯೆ ಸಮತೋಲನ ಸಾಧಿಸಲು ಈಗಾಗಲೇ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಕಡಿತ ಪ್ರಾರಂಭವಾಗಿದೆ.
100 ಮಿಲಿಯನ್ ಯೂನಿಟ್ನಷ್ಟು ಜಿಗಿತ ಕಂಡ ವಿದ್ಯುತ್ ಬಳಕೆ:ರಾಜ್ಯ ಮಳೆಯ ಕೊರತೆಯಿಂದ ಬರದತ್ತ ಸಾಗುತ್ತಿದೆ. ಮಳೆಗಾಲದಲ್ಲೇ ರಾಜ್ಯದಲ್ಲಿ ತಾಪಮಾನ ಗಗನಕ್ಕೇರಿದೆ. ಹೀಗಾಗಿ ರಾಜ್ಯದಲ್ಲಿ ಈ ಬಾರಿ ಹೆಚ್ಚು ಪ್ರಮಾಣದ ವಿದ್ಯುತ್ ಬಳಕೆಯಲ್ಲಿ ಜಿಗಿತವಾಗಿದೆ. ಇದು ಇಂಧನ ಇಲಾಖೆಗೆ ಇದೀಗ ತಲೆನೋವಾಗಿ ಪರಿಣಮಿಸಿದೆ. ಮಳೆ ಕೊರತೆಯ ಹಿನ್ನೆಲೆ ರೈತರ ಪಂಪ್ ಸೆಟ್ ಬಳಕೆ, ಗೃಹ ಬಳಕೆಯ ವಿದ್ಯುತ್ ಪ್ರಮಾಣದಲ್ಲಿ ಜಿಗಿತ ಕಂಡಿದೆ. ರಾಜ್ಯದ ಗರಿಷ್ಠ ವಿದ್ಯುತ್ ಬೇಡಿಕೆ ಸುಮಾರು 14,500 ಮೆಗಾ ವ್ಯಾಟ್ಗೂ ಅಧಿಕ ಇದೆ. ಈ ವಿದ್ಯುತ್ ಬಳಕೆಯ ಪ್ರಮಾಣ ದಿನೇ ದಿನೆ ಏರಿಕೆ ಕಾಣುತ್ತಲೇ ಇದೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಆಗಸ್ಟ್ 27ರವರೆಗೆ ರಾಜ್ಯದ ವಿದ್ಯುತ್ ಬಳಕೆಯಲ್ಲಿ ಬರೋಬ್ಬರಿ 100 ಮಿಲಿಯನ್ ಯೂನಿಟ್ ಹೆಚ್ಚಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ರಾಜ್ಯದ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಆದರೆ, ಈ ಬಾರಿ ಮಳೆಗಾಲದಲ್ಲೂ ವಿದ್ಯುತ್ ಬಳಕೆ ಪ್ರಮಾಣ ತಾರಕಕ್ಕೇರಿದೆ. ವಿದ್ಯುತ್ ಇಲಾಖೆ ನೀಡುವ ನಿತ್ಯ ವಿದ್ಯುತ್ ಉತ್ಪಾದನೆ, ಬಳಕೆಯ ಅಂಕಿ - ಅಂಶದಂತೆ ಈ ಆಗಸ್ಟ್ 27ರಂದು ರಾಜ್ಯದಲ್ಲಿ 271 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಕಳೆದ ಬಾರಿ ಇದೇ ಅವಧಿಗೆ ಆಗಿರುವ ವಿದ್ಯುತ್ ಬಳಕೆ 171 ದಶಲಕ್ಷ ಯೂನಿಟ್. ಅಂದರೆ, ಈ ಬಾರಿ ಬರೋಬ್ಬರಿ 100 ದಶಲಕ್ಷ ಯುನಿಟ್ನಷ್ಟು ವಿದ್ಯುತ್ ಬಳಕೆಯಲ್ಲಿ ಭಾರಿ ಏರಿಕೆಯಾಗಿದೆ.
ಜಲವಿದ್ಯುತ್ ಘಟಕದಲ್ಲಿ ಕುಸಿತ ಕಂಡ ಉತ್ಪಾದನೆ:ಮಳೆ ಅಭಾವದಿಂದ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಜಲ ಘಟಕಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಈ ಬಾರಿ ನೀರಿನ ಮಟ್ಟ ಭಾರಿ ಕುಸಿತ ಕಂಡಿರುವುದರಿಂದ ಜಲ ವಿದ್ಯುತ್ ಘಟಕಗಳಲ್ಲೂ ವಿದ್ಯುತ್ ಉತ್ಪಾದನೆ ಕಳೆದ ಬಾರಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಇಂಧನ ಇಲಾಖೆಯ ವಿದ್ಯುತ್ ಉತ್ಪಾದನೆ ಸ್ಥಿತಿಗತಿಯ ಅಂಕಿ - ಅಂಶದಂತೆ ಈ ಬಾರಿ ಆ.27ಕ್ಕೆ ಮೂರು ಪ್ರಮುಖ ಜಲಾಶಯಗಳಾದ ಶರಾವತಿ, ವಾರಾಹಿ ಮತ್ತು ಎನ್ಪಿಹೆಚ್ ಜಲ ವಿದ್ಯುತ್ ಘಟಕದಿಂದ ಒಟ್ಟು 21.94 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಈ ಪ್ರಮುಖ ಜಲ ವಿದ್ಯುತ್ ಘಟಕಗಳಿಂದ 26.02 ಮಿ.ಯು. ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ಅದೇ ರೀತಿ ಇತರ ಸಣ್ಣ ಜಲ ವಿದ್ಯುತ್ ಘಟಕಗಳಿಂದ ಆ.27ಕ್ಕೆ 7.40 ಮಿ.ಯು. ವಿದ್ಯುತ್ ಉತ್ಪಾದಿಸಿದರೆ, ಕಳೆದ ವರ್ಷ ಇದೇ ದಿನ ಒಟ್ಟು 15.70 ಮಿ.ಯು. ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು.