ಬೆಂಗಳೂರು:ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಆರ್ಥಿಕ ವರ್ಷ 2020-21ರ ಅವಧಿಯಲ್ಲಿ ಸರಾಸರಿ ಶೇ. 5.40ರಂತೆ ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಆಗಬೇಕಿದ್ದ 2020-21ನೇ ಸಾಲಿನ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ನವೆಂಬರ್ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಬೇಡಿಕೆ ಮತ್ತು ವಿದ್ಯುತ್ ಬಳಕೆ ದರಗಳಲ್ಲಿನ ಹೆಚ್ಚಳವನ್ನು ಪರಿಗಣಿಸಿ ಹೆಚ್ಚಳವನ್ನು ಸರ್ಕಾರ ಅನುಮೋದಿಸಿದೆ. ಆಯೋಗವು ಮಂಗಳೂರು ವಿಶೇಷ ಆರ್ಥಿಕ ವಲಯ, ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿನ ಏಕಸ್ ವಿಶೇಷ ಆರ್ಥಿಕ ವಲಯಗಳ ಗ್ರಾಹಕರಿಗೆ ಅನ್ವಯವಾಗುವ ಪರಿಷ್ಕೃತ ಚಿಲ್ಲರೆ ವಿದ್ಯುಚ್ಛಕ್ತಿ ಸರಬರಾಜು ದರಗಳನ್ನೂ ಸಹ ನಿರ್ಧರಿಸಿದೆ. ಆರ್ಥಿಕ ವರ್ಷ 2021ರ ಅವಧಿಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಂದ ಕೆಪಿಟಿಸಿಎಲ್ ವಸೂಲಿ ಮಾಡಬೇಕಾದ ಪರಿಷ್ಕೃತ ವಿದ್ಯುಚ್ಛಕ್ತಿ ಪ್ರಸರಣ ದರಗಳನ್ನೂ ಸಹ ನಿರ್ಧರಿಸಿದೆ.
ಈ ಪರಿಷ್ಕೃತ ದರಗಳು ನ. 1 ಅಥವಾ ಅದರ ನಂತರದ ಮೊದಲನೇ ಮೀಟರ್ ಓದುವ ದಿನಾಂಕದಿಂದ ಬಳಕೆ ಮಾಡಿದ ವಿದ್ಯುಚ್ಛಕ್ತಿಗೆ ಅನ್ವಯವಾಗುತ್ತವೆ. ಭಾರತದಲ್ಲಿ ಮತ್ತು ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಕೊವಿಡ್-19 ಸಾಂಕ್ರಮಿಕ ವಿಷಮ ಪರಿಸ್ಥಿತಿಯಿಂದಾಗಿ ಸಂಪೂರ್ಣ ಬಂದ್ ಹೇರಲಾಗಿದ್ದರಿಂದ ಎಲ್ಲಾ ವಲಯಗಳ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿರುವ ಕಾರಣ ಈ ಹೆಚ್ಚಳ ಅನಿವಾರ್ಯವಾಗಿದೆ. ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ನ. 3ರಂದು ನಡೆಯಬೇಕಾಗಿದ್ದ ಉಪ ಚುನಾವಣೆ ಮತದಾನ ದಿನಾಂಕ ಘೋಷಣೆಯಿಂದಾಗಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ದರ ಹೆಚ್ಚಳ ವಿಳಂಬವಾಗಿದೆ. ಪ್ರಸ್ತುತ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಹೊಸ ಉಷ್ಣ ವಿದ್ಯುತ್ ಮೂಲಗಳಿಂದ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುಚ್ಛಕ್ತಿ ಖರೀದಿಸುವುದರಿಂದ, ವಿದ್ಯುತ್ ಖರೀದಿಯ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಸರಬರಾಜು ದರದಲ್ಲಿನ ಹೆಚ್ಚಳವು ಅನಿವಾರ್ಯವಾಗಿದೆ. ಕಾರ್ಯ ಮತ್ತು ನಿರ್ವಹಣೆ ಮತ್ತು ಬಂಡವಾಳ ವೆಚ್ಚಕ್ಕಾಗಿ ಪಡೆಯುವ ಸಾಲದ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ ಎಂದು ತಿಳಿಸಲಾಗಿದೆ.
ಮುಂದಿನ ಐದು ತಿಂಗಳು ಜಾರಿ:
ಈ ಹೊಸ ಪರಿಷ್ಕೃತ ದರ ಮುಂದಿನ ಐದು ತಿಂಗಳು ಚಾಲ್ತಿಯಲ್ಲಿ ಇರಲಿದೆ. ದರ ಪರಿಷ್ಕರಣೆಯಿಂದ ವಸೂಲು ಮಾಡಬಹುದಾಗಿದ್ದ ಒಟ್ಟು ಆದಾಯದ ಕೊರತೆಯಾದ 2,473 ಕೊಟಿ ರೂಪಾಯಿಗಳಲ್ಲಿ 2020ರ ಏಪ್ರಿಲ್ 1ರಿಂದ 2020ರ ಅಕ್ಟೋಬರ್ 31ರವರೆಗೆ (7 ತಿಂಗಳಲ್ಲಿ) ದರ ಪರಿಷ್ಕರಣೆಯಿಂದಾಗಿ ವಸೂಲು ಮಾಡಬಹುದಾಗಿದ್ದ 1,443 ಕೋಟಿ ರೂಪಾಯಿಗಳನ್ನು ನಿಯಂತ್ರಕ ಸ್ವತ್ತಾಗಿ ಇಟ್ಟು, ಪ್ರಸ್ತುತ ಕೋವಿಡ್ - 19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಚಾಲ್ತಿಯಲ್ಲಿರುವ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳಿಂದಾಗಿ ಗ್ರಾಹಕರಿಗೆ ಹೊರೆಯಾಗದಂತೆ ಆರ್ಥಿಕ ವರ್ಷ 2022 ಹಾಗೂ 2023ರ ಚಿಲ್ಲರೆ ವಿದ್ಯುತ್ ಪೂರೈಕೆ ದರ ನಿರ್ಧರಣೆ ಯಲ್ಲಿ ವಸೂಲಿ ಮಾಡಲು ತೀರ್ಮಾನಿಸಿ ಇರುತ್ತದೆ. ಉಳಿದ ಆದಾಯದ ಕೊರತೆಯಾದ 1,030 ಕೋಟಿ ರೂಪಾಯಿಗಳನ್ನು ಆರ್ಥಿಕ ವರ್ಷ 2021ರ ಉಳಿದ 5 ತಿಂಗಳ ಅವಧಿಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಮೂಲಕ ದಸೂಲಾತಿಗೆ ಅನುಮೋದಿಸಿದೆ ಎಂದು ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದರ ಹೆಚ್ಚಳಕ್ಕೆ ಪ್ರಮುಖ ಕಾರಣಗಳು:
ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳ ಕಾರಣ ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿಗದಿತ ವೆಚ್ಚಗಳ ಪಾವತಿ. ಸಿಬ್ಬಂದಿಗೆ ವೇತನ ಪರಿಷ್ಕರಣೆ, ವೆಚ್ಚಗಳು ಇತ್ಯಾದಿ. ಬಂಡವಾಳ ವೆಚ್ಚ ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ಸಾಲಗಳ ಮೇಲಿನ ಬಡ್ಡಿ. ಆರ್ಥಿಕ ವರ್ಷ 2020 ಕ್ಕಿಂತ ಆರ್ಥಿಕ ವರ್ಷ 2021 ರ ಅವಧಿಯಲ್ಲಿ ಆಗಬಹುದಾದ ವೆಚ್ಚದಲ್ಲಿನ ಹೆಚ್ಚಳ ಕೂಡ ಪರಿಗಣಿಸಲಾಗಿದೆ. ವಿದ್ಯುತ್ ಖರೀದಿ ವೆಚ್ಚದಲ್ಲಿ 3,132 ಕೋಟಿ ರೂಪಾಯಿಗಳಷ್ಟು ಹೆಚ್ಚಳ(ಶೇ.9.2ಹೆಚ್ಚಳ). ಹೊಸ ಉಷ್ಣ ವಿದ್ಯುತ್ ಕೇಂದ್ರಗಳಿಂದ ಮತ್ತು ನವೀಕರಿಸಬಹುದಾದ ಇಂಧನ ಶಕ್ತಿಯ ವಿದ್ಯುತ್ ದರ ಹೆಚ್ಚಳದಿಂದಾಗಿ ಎದುರಾಗಿರುವ ಅಗತ್ಯ ಪೂರೈಸಲು, ಕಾರ್ಯ ಮತ್ತು ನಿರ್ವಹಣೆ ವೆಚ್ಚದಲ್ಲಿ 1,050 ಕೋಟಿ ರೂಪಾಯಿಗಳಷ್ಟು ಹೆಚ್ಚಳ(ಶೇ.21,45ಹೆಚ್ಚಳ). ಬಡ್ಡಿ, ಹಣಕಾಸು ಶುಲ್ಕಗಳು ಮತ್ತು ಸವಕಳಿ ದರಗಳಲ್ಲಿ 212 ಕೋಟಿ ರೂಪಾಯಿಗಳಷ್ಟು ಹೆಚ್ಚಳ (ಶೇ.6 ಹೆಚ್ಚಳ) ಆಗಲಿದೆ ಎಂದು ತಿಳಿಸಿದ್ದು, ವಿದ್ಯುತ್ ಸರಬರಾಜು ಕಂಪನಿಗಳು ಈ ಕೆಳಗೆ ತಿಳಿಸಿದಂತೆ ಎಲ್ಲಾ ಪ್ರವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್ಟಿಗೆ 52ರಿಂದ 196 ಪೈಸೆಗಳ ವಿಭಿನ್ನ ಏರಿಕೆಯನ್ನು ಕೋರಿದ್ದವು. ವಿದ್ಯುತ್ ಸರಬರಾಜು ಕಂಪನಿವಾರು ಕೋರಿದ್ದ ಏರಿಕೆ ಮತ್ತು ಶೇಕಡಾವಾರು ಏರಿಕೆ ಈ ಕೆಳಕಂಡಂತೆ ಮಾಡಲಾಗಿದೆ.