ಬೆಂಗಳೂರು :2023ರ ಜನವರಿ 14ರ ಮಕರ ಸಂಕ್ರಾಂತಿಯಿಂದ ವಿದ್ಯುತ್ ಚಾಲಿತ ಮಗ್ಗದ ಕೆಲಸಗಾರರಿಗೂ ಸಹ ನೇಕಾರ ಸಮ್ಮಾನ್ ಯೋಜನೆಯಡಿ ವಾರ್ಷಿಕ 5000 ರೂ.ಗಳ ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಬಹುದಿನಗಳ ಬೇಡಿಕೆ ಈಡೇರಿಸಿ ಐತಿಹಾಸಿಕ ನಿರ್ಣಯ ತೆಗೆದುಕೊಂಡ ಸಿಎಂ ಬೊಮ್ಮಾಯಿ ಅವರಿಗೆ ಬೆಳಗಾವಿಯ ಸುವರ್ಣಸೌಧದ ಸಭಾಂಗಣದಲ್ಲಿ ಇಂದು ವಿಶೇಷ ಅಭಿನಂದನಾ ಸಮಾರಂಭ ನಡೆಯಿತು. ಬೆಳಗಾವಿ ನಗರ ಸೇರಿದಂತೆ ಸುತ್ತಲಿನ ತಾಲೂಕುಗಳ ನೇಕಾರ, ಕುರುವಿನಶೆಟ್ಟಿ, ದೇವಾಂಗ, ಹಠಗರ ದೇವಾಂಗ ಸಮಾಜ, ಸಕ್ಕುಸಾಯಿ ಸಮಾಜ, ಾಮದೇವ ಸಿಂಪಿ, ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ರೈತರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ವಿದ್ಯಾನಿಧಿ ಯೋಜನೆಯ ವ್ಯಾಪ್ತಿಗೆ ನೇಕಾರ ಮಕ್ಕಳನ್ನು ಸಹ ತರಲಾಗಿದೆ. ಜನವರಿ ಮೊದಲ ವಾರದಲ್ಲಿ ವಿದ್ಯಾನಿಧಿ ಸ್ಕಾಲರ್ ಶಿಪ್ ನೀಡಲಾಗುವುದು ಎಂದು ತಿಳಿಸಿದರು.
ಸಾಂಪ್ರದಾಯಿಕ ಉದ್ಯೋಗಗಳಿಗೆ ಪ್ರೋತ್ಸಾಹಿಸುವುದು ದೇಶದ ಆರ್ಥಿಕತೆಯ ಹಿತದೃಷ್ಡಿಯಿಂದ ಅನುಕೂಲಕರ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ನೇಕಾರರು ಸಹ ಶ್ರಮಜೀವಿಗಳಾಗಿದ್ದಾರೆ. ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಎಂಬುದನ್ನು ರೈತರ ಹಾಗೇ ನೇಕಾರರು ಕಾರ್ಯಗತ ಮಾಡುತ್ತಾರೆ. ಇಂತಹ ದುಡಿಯುವ ವರ್ಗದ ಹಿತಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಬೇಡಿಕೆಯಂತೆ ನೇಕಾರರಿಗೆ 2 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ನೇಕಾರರಿಗೆ ತಮಿಳುನಾಡಿನ ಮಾದರಿಯಲ್ಲಿ ಉಚಿತ ವಿದ್ಯುತ್ ಕೊಡಲು ಯೋಜಿಸಲಾಗಿದೆ. ಯುನಿಟ್ ವೊಂದಕ್ಕೆ ಈಗ 2 ರೂ. ಇರುವುದನ್ನು ಇದೀಗ 40 ಪೈಸೆಗೆ ಇಳಿಸಿದ್ದೇವೆ ,ವೃತ್ತಿಪರ ನೇಕಾರ ಕೆಲಸಗಾರರಿಗೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ, ನೇಕಾರಿಕೆಯನ್ನು ಗುರುತಿಸಿ ಅನುಕೂಲತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಹವಾಸಿ ಪ್ರಮಾಣ ಪತ್ರ ಕೊಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಅನುಷ್ಠಾನ ಮಾಡಲಾಗುವುದು ಎಂದು ಸಿಎಂ ಹೇಳಿದರು.
ನೇಕಾರರಿಗೆ ಅನುಕೂಲತೆ ಮಾಡಿಕೊಡುವ ನಿಟ್ಟಿನಲ್ಲಿ ಮನೆಯಲ್ಲಿನ ಕೈಮಗ್ಗಗಳನ್ನು ಗುಡಿ ಕೈಗಾರಿಕೆ ಎಂದು ಪರಿಗಣಿಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣ ಪತ್ರದಿಂದ ವಿನಾಯಿತಿ ಕೊಡಿಸಲಾಗುತ್ತದೆ. ದೊಡ್ಡ ಮಟ್ಟದ ಖಾರ್ಕಾನೆಗಳ ಸ್ಥಾಪನೆಗಿಂತ ಅತೀ ಹೆಚ್ಚು ಜನರಿಗೆ ಉದ್ಯೋಗ ಕೊಡುವ ಕಾರ್ಯದಿಂದಾಗಿ ದೇಶ ಅಭಿವೃದ್ದಿಯಾಗಲಿದೆ ಎಂಬುದು ಗಾಂಧೀಜಿಯವರ ವಿಚಾರಧಾರೆಯಾಗಿದೆ. ತಂತ್ರಜ್ಞಾನ ಬೆಳೆಯದೇ ಇದ್ದ ಕಾಲದಲ್ಲಿ ಮಾನವನ ಗೌರವ ರಕ್ಷಣೆ ಮಾಡಿದವರು ನೇಕಾರರು. ಹೀಗಾಗಿ ನೇಕಾರ ಹಿತರಕ್ಷಣೆಗೆ ಸಹ ಸರ್ಕಾರ ಬದ್ಧವಾಗಿರುವುದಾಗಿ ಹೇಳಿದರು.
ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ನರೇಂದ್ರ ಮೋದಿಯವರು ಮತ್ತು ಬಿ.ಎಸ್. ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಅವರು ನಾಡಿನ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ಮಾತನಾಡಿ, ನೇಕಾರರು ಜನರ ಮಾನ ಕಾಪಾಡುವ ಮಹತ್ವದ ಕಾರ್ಯ ಮಾಡುತ್ತಾರೆ. ರೈತ ಮತ್ತು ನೇಕಾರ ಇಬ್ಬರು ರಾಜ್ಯದ ಎರಡು ಕಣ್ಣುಗಳಿದ್ದಂತೆ. ಇದನ್ನರಿತು ರಾಜ್ಯ ಸರ್ಕಾರವು ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ, ವಿದ್ಯುತ್ ಸೌಕರ್ಯ, ನೇಕಾರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ, ನೇಕಾರರು ಸೇರಿದಂತೆ 60 ವರ್ಷ ಮೇಲ್ಪಟ್ಟವರಿಗೆ ಸಂಧ್ಯಾಸುರಕ್ಷಾ ಸೇರಿದಂತೆ ಇನ್ನೂ ನಾನಾ ಯೋಜನೆಗಳನ್ನು ಜಾರಿ ಮಾಡಿದೆ. ನೇಕಾರ ಸಮುದಾಯದವರು ಮುಂದಿಟ್ಟಂತೆ ಶೇ.95.09ರಷ್ಟು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ :ನೇಕಾರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ: ನೇಕಾರ ಸಮ್ಮಾನ್ ಯೋಜನೆಗೆ ಸಿಎಂ ಚಾಲನೆ