ಆಟೋ ಮೇಲೆ ಬಿದ್ದ ವಿದ್ಯುತ್ ಕಂಬ ಬೆಂಗಳೂರು: ಆಟೋ ರಿಕ್ಷಾ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ಚಾಲಕ ಹಾಗೂ ಗ್ರಾಹಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಜಯನಗರ 8ನೇ ಬ್ಲಾಕ್ನ ಶಾಂತಿ ಆಸ್ಪತ್ರೆಯ ಎದುರು ನಡೆಯಿತು. ಗ್ರಾಹಕರನ್ನು ಕರೆತಂದಿದ್ದ ಚಾಲಕ ಮೋಹನ್ ಆಸ್ಪತ್ರೆ ಎದುರು ಆಟೋ ನಿಲ್ಲಿಸಿದ್ದರು. ಗ್ರಾಹಕರನ್ನು ಇಳಿಸಿ ತಾನೂ ಸಹ ಕೆಳಗಿಳಿದಿದ್ದರು. ಅಷ್ಟರಲ್ಲೇ ಕಂಬ ರಿಕ್ಷಾದ ಮೇಲೆ ಬಿದ್ದಿದೆ. ಜೆಸಿಬಿ ಯಂತ್ರ ಡಿಕ್ಕಿಯಾದ ಪರಿಣಾಮ ಕಂಬ ತುಂಡಾಗಿ ಆಟೋ ಮೇಲೆ ಅಪ್ಪಳಿಸಿತ್ತು.
ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ರಿಪೇರಿ ವೆಚ್ಚ ಭರಿಸಲು ಜೆಸಿಬಿ ಮಾಲೀಕರು ಸಮ್ಮತಿಸಿದ್ದಾರೆ. ವಿದ್ಯುತ್ ಕಂಬವನ್ನು ತೆರವುಗೊಳಿಸಲಾಗಿದೆ.
ವಿದ್ಯುತ್ ಕಂಬ ಬಿದ್ದು ವಿದ್ಯಾರ್ಥಿನಿಗೆ ಗಾಯ:ಇತ್ತೀಚಿಗೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ವಿದ್ಯುತ್ ತಂತಿ ಬಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜು ಬಳಿ ನಡೆದಿತ್ತು. ವಿದ್ಯಾರ್ಥಿನಿ ಪ್ರಿಯಾ ಎಂಬವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಖಾಸಗಿ ಕಾಲೇಜಿನಿಂದ ವಿದ್ಯಾರ್ಥಿನಿ ವಾಪಸಾಗುತ್ತಿದ್ದರು. ವಾಟರ್ ಟ್ಯಾಂಕರ್ನ ಚಕ್ರಕ್ಕೆ ವಿದ್ಯುತ್ ಕಂಬದಲ್ಲಿದ್ದ ಟೆಲಿಫೋನ್ ಕೇಬಲ್ ಸಿಲುಕಿಕೊಂಡಿತ್ತು. ಇದನ್ನು ಗಮನಿಸದೆ ಚಾಲಕ ವಾಹನ ಚಲಾಯಿಸಿದ್ದು, ಕಂಬ ನೆಲಕ್ಕುರುಳಿದೆ. ಆಗ ಅದೇ ದಾರಿಯಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯ ಮೇಲೆ ತಂತಿಗಳು ಬಿದ್ದಿದ್ದವು. ವಿದ್ಯಾರ್ಥಿನಿಯ ಮುಖ ಮತ್ತು ದೇಹದ ಭಾಗಗಳಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಸಾಗರ್ ಆಸ್ಪತ್ರೆಯಿಂದ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:ರೈಲು ನಿಲ್ದಾಣದಲ್ಲಿ ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ: ರೈಲ್ವೆ ಸಿಬ್ಬಂದಿ ಮಾಡಿದ್ದೇನು?