ಬೆಂಗಳೂರು :ನಗರದಲ್ಲಿ ಬಿಎಂಟಿಸಿ ಕಾರ್ಯಾಚರಣೆಗಿಳಿಸಿರುವ ಎಲೆಕ್ಟ್ರಿಕ್ ಬಸ್‌ಗಳು ಜನಪ್ರಿಯತೆಯೊಂದಿಗೆ ನಿಗಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ತಂದುಕೊಡುತ್ತಿವೆ. ಇ-ಬಸ್‌ಗಳ ನವೀನತೆ, ಸುಸಜ್ಜಿತ ಸೌಕರ್ಯ ಮತ್ತು ಪರಿಸರಸ್ನೇಹಿ ವ್ಯವಸ್ಥೆಗಳ ಬಗ್ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.
ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಿ ಒಂದೂವರೆ ವರ್ಷಗಳು ಕಳೆಯುತ್ತಿದೆ. ನಗರದಲ್ಲಿ ಬಿಎಂಟಿಸಿ 390 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗಿಳಿಸಿದೆ. ಪ್ರತಿದಿನ ಸುಮಾರು 4 ಲಕ್ಷ ಜನ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಇವುಗಳ ಆದಾಯ ಸಾಮಾನ್ಯ ಬಸ್‌ಗಳಿಗಿಂತ ಅಧಿಕ. ಮೊದಲ ಬಾರಿಗೆ ಬಿಎಂಟಿಸಿ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಿದೆ. ಬಸ್‌ಗಳ ನಿರ್ವಹಣೆಯನ್ನು ನಿಗಮವೇ ನೋಡಿಕೊಳ್ಳುತ್ತಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಡಿಸೆಂಬರ್ 2021ರಲ್ಲಿ 90 ಇ-ಬಸ್‌ಗಳನ್ನು ಖರೀದಿಸಲಾಗಿದೆ. ಆಗಸ್ಟ್ 2022ರ ನಂತರ ಫೇಮ್ 2 ಯೋಜನೆಯಡಿ 300 ಇ-ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಕೇಂದ್ರ ಸರ್ಕಾರದ ಫ್ರೇಮ್-2 ಯೋಜನೆಯಡಿ ಬಿಎಂಟಿಸಿ ಹೊಸದಾಗಿ 921 ಇ-ಬಸ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಇದೀಗ ನಗರದ 18 ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿವೆ.
ಸಾಮಾನ್ಯ ಬಸ್‌ಗಳಿಗಿಂತ ಆದಾಯ ಪ್ರತಿ ಕಿ.ಮೀಟರ್ಗೂ 5 ರೂ. ಹೆಚ್ಚು. 9 ಮೀಟರ್ ಉದ್ದದ ಇ - ಬಸ್ ಕಾರ್ಯಾಚರಣೆಯಿಂದ ಪ್ರತಿ ಕಿ.ಮೀ.ಗೆ 51 ರೂಪಾಯಿ ಮತ್ತು 12 ಮೀಟರ್ ಬಸ್‌ಗಳಿಂದ ಪ್ರತಿ ಕಿ.ಮೀಗೆ 48 ರೂಪಾಯಿ ಲಾಭ ಬರುತ್ತಿದೆ.