ಬೆಂಗಳೂರು:ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಅಖಾಡ ದಿನೇ ದಿನೆ ಕಳೆಗಟ್ಟುತ್ತಿದೆ. ರಾಜಕೀಯ ಪಕ್ಷಗಳು ಮತದಾರರ ಮನಗೆಲ್ಲಲು ನಾನಾ ಕಸರತ್ತು ನಡೆಸುತ್ತಿವೆ. ಆದರೆ ಕರ್ನಾಟಕದ ಚುನಾವಣೆಯಲ್ಲಿ ಜಾತಿ ರಾಜಕೀಯದ್ದೇ ಪ್ರಾಬಲ್ಯ. ಹಾಗಾಗಿ ರಾಜಕೀಯ ಪಕ್ಷಗಳೂ ಅದಕ್ಕನುಗುಣವಾಗಿ ಚುನಾವಣಾ ತಂತ್ರಗಾರಿಕೆ ರೂಪಿಸುತ್ತವೆ.
ಮೇ 10 ರಾಜ್ಯದಲ್ಲಿ ಜಿದ್ದಾಜಿದ್ದಿನ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಮತದಾರರ ಓಲೈಸಲು ಎಲ್ಲಾ ರೀತಿಯ ಶ್ರಮ ಹಾಕುತ್ತಿವೆ. ಬಿರು ಬಿಸಿಲಿನಲ್ಲಿ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಈಗಾಗಲೇ ಪಕ್ಷಗಳು ಗೆಲುವಿನ ಲೆಕ್ಕಾಚಾರದೊಂದಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದೆ. ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಸಾಕಷ್ಟು ಅಳೆದು ತೂಗಿ ಜಾತಿವಾರು ಆಧಾರದ ಮೇಲೆ ಟಿಕೆಟ್‌ಗಳನ್ನು ಹಂಚಿಕೆ ಮಾಡಿವೆ.
ರಾಜ್ಯದಲ್ಲಿ ಪ್ರಾಂತ್ಯವಾರು ಜಾತಿ ಪ್ರಾಬಲ್ಯದ ಆಧಾರದಲ್ಲಿ ರಾಜಕೀಯ ಲೆಕ್ಕಾಚಾರ ನಡೆಯುತ್ತದೆ. ಜಾತಿ ರಾಜಕೀಯದ ಮೂಲಕ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತದೆ. ಜಾತ್ಯತೀತ, ಸಾಮಾಜಿಕ ನ್ಯಾಯ ಎಂಬ ಮಾತು ಎಲ್ಲ ಪಕ್ಷದಲ್ಲೂ ದೊಡ್ಡದಾಗಿ ಕೇಳಿ ಬಂದರೂ, ಪ್ರಭಾವಿ ಸಮುದಾಯವನ್ನು ಕಡೆಗಣಿಸುವ ಧೈರ್ಯವನ್ನು ಯಾವ ಪಕ್ಷವೂ ಮಾಡಿಲ್ಲ. ಪ್ರಾಬಲ್ಯವಿರುವ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಣೆ ಹಾಕಲಾಗುತ್ತದೆ. ಈ ಬಾರಿಯ ಚುನಾವಣೆಯಲ್ಲೂ ಜಾತಿವಾರು ಲೆಕ್ಕದೊಂದಿಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ.
ರಾಜ್ಯದ ಜಾತಿ ಪ್ರಾಬಲ್ಯ ಹೇಗಿದೆ?:ರಾಜ್ಯದ ಪ್ರಬಲ ಸಮುದಾಯ ವೀರಶೈವ-ಲಿಂಗಾಯತ. ಇವರು ಶೇ.17ರಷ್ಟು ಜನಸಂಖ್ಯೆ ಹೊಂದಿದ್ದಾರೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ ಲಿಂಗಾಯತ ಸಮುದಾಯದ್ದೇ ಪಾರುಪತ್ಯ. ದಕ್ಷಿಣ ಕರ್ನಾಟಕದಲ್ಲೂ ವೀರಶೈವ ಲಿಂಗಾಯತರ ಸಂಖ್ಯಾಬಲ ಹೆಚ್ಚಿದೆ. ಸುಮಾರು 100 ಕ್ಷೇತ್ರಗಳಲ್ಲಿ ಲಿಂಗಾಯತ ಪ್ರಾಬಲ್ಯವಿದೆ. 70 ಅಧಿಕೃತ ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕರು. ಬಾಗಲಕೋಟೆ, ದಾವಣಗೆರೆ, ವಿಜಯಪುರ, ಧಾರವಾಡ, ಬೆಳಗಾವಿ, ಹಾವೇರಿ, ಚಿತ್ರದುರ್ಗ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಬಹುವಾಗಿ ವೀರಶೈವ ಲಿಂಗಾಯತರೇ ನಿರ್ಣಾಯಕರು. ಸದ್ಯ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯೇ ರಾಜ್ಯದ ಲಿಂಗಾಯತ ಸಮುದಾಯದ ಆಶೀರ್ವಾದ ಪಡೆದಿದೆ.
ರಾಜ್ಯದ ಎರಡನೇ ಅತ್ಯಂತ ಪ್ರಬಲ ಸಮುದಾಯ ಒಕ್ಕಲಿಗರು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯ ಸುಮಾರು ಶೇ.12-13ರಷ್ಟು ಪ್ರಾಬಲ್ಯ ಹೊಂದಿದೆ. ಹಳೇ ಮೈಸೂರು ಭಾಗ ಒಕ್ಕಲಿಗ ಸಮಯದಾಯದ ಅಖಾಡವಾಗಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಕ್ಕಲಿಗ ಲೆಕ್ಕಾಚಾರದೊಂದಿಗೆ ಚುನಾವಣಾ ತಂತ್ರಗಾರಿಕೆ ನಡೆಸುತ್ತವೆ. ರಾಜ್ಯದಲ್ಲಿ ಸುಮಾರು 45ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಒಕ್ಕಲಿಗರ ಪಾರುಪತ್ಯ ಇದೆ. ಮಂಡ್ಯ, ಹಾಸನ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಒಕ್ಕಲಿಗರು ನಿರ್ಣಾಯಕರಾಗಿದ್ದಾರೆ. ಸದ್ಯ ಜೆಡಿಎಸ್ ಪಕ್ಷಕ್ಕೆ ಒಕ್ಕಲಿಗ ಸಮುದಾಯವೇ ಪ್ರಮುಖ ಮತಬ್ಯಾಂಕ್ ಆಗಿದೆ.