ಬೆಂಗಳೂರು:ರಾಜ್ಯದ 11 ಜಿಲ್ಲೆಗಳ 17 ನಗರ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ ಅಂತ್ಯದೊಳಗಾಗಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿರುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾರರ ಪಟ್ಟಿ ಅಂತಿಮಗೊಳಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.
17 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ಮತದಾರರಪಟ್ಟಿ ಅಂತಿಮಗೊಳಿಸಲು ಸೂಚನೆ ಪ್ರತಿ ವಾರ್ಡಿಗೆ ಉಪವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ಮಹಾ ನಗರಪಾಲಿಕೆಗಳ ಚುನಾವಣಾಧಿಕಾರಿಗಳ ನೇಮಕ ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಗೆ ಒಬ್ಬ ಅಧಿಕಾರಿಯನ್ನು ಉಪಚುನಾಣಾಧಿಕಾರಿಯನ್ನಾಗಿ ನೇಮಿಸುವುದು. ನಗರಸಭೆ, ಪುರಸಭೆಗಳಿಗೆ 6 ರಿಂದ 8 ವಾರ್ಡುಗಳಿಗೆ ಉಪವಿಭಾಗಾಧಿಕಾರಿ ಅಥವಾ ಅದೇ ಸ್ಥಾನಮಾನ ಹೊಂದಿರುವ ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು. ಪುರಸಭೆಗೆ ಶಿರಸ್ತೇದಾರ್ ದರ್ಜೆಯ ಒಬ್ಬ ಚುನಾವಣಾಧಿಕಾರಿಯನ್ನು ನಿಯೋಜಿಸಲು ಸೂಚಿಸಲಾಗಿದೆ.
ಈಗಾಗಲೇ ಆಯೋಗ ಸಿದ್ದಪಡಿಸಿರುವ ಮತದಾರರ ಪಟ್ಟಿಯನ್ನು ಸಂಬಂಧಿಸಿದ ಕಚೇರಿಗಳಲ್ಲಿ ಬಹಿರಂಗಪಡಿಸಬೇಕು. ಅಲ್ಲದೇ ಸಂಬಂಧಿಸಿದ ರಾಜಕೀಯ ಪಕ್ಷಗಳಿಗೂ ಮತದಾರರ ಪಟ್ಟಿಯನ್ನು ನೀಡುವುದರ ಜೊತೆಗೆ ಅಂತಿಮ ಅಂಕಿಅಂಶಗಳನ್ನು ಪ್ರಕಟಿಸಬೇಕು. ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಕೆ ಮಾಡಲು ಆಯೋಗ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭೆಯ 31 ವಾರ್ಡ್, ಕನಕಪುರದ ನಗರಸಭೆ 31,ಮಾಗಡಿ ಪುರಸಭೆ 23 ವಾರ್ಡ್, ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್, ಕೋಲಾರ ಮತ್ತು ಮುಳಬಾಗಿಲು ನಗರಸಭೆಗಳ 35 ಮತ್ತು 31 ವಾರ್ಡ್ಗಳಿಗೆ ಕೆಜಿಎಫ್ ನಗರಸಭೆಯ 35 ವಾರ್ಡ್ಗಳಿಗೆ, ಚಿಕ್ಕಬಳ್ಳಾಪುರ ನಗರಸಭೆಯ 31 ವಾರ್ಡ್, ಗೌರಿಬಿದನೂರು, ಚಿಂತಾಮಣಿ ನಗರಸಭೆಯ ತಲಾ 31 ವಾರ್ಡ್ಗಳಿಗೆ, ಜೋಗ್, ಕಾರ್ಗಿಲ್ ಪಟ್ಟಣ ಪಂಚಾಯಿತಿಯ 11 ವಾರ್ಡ್ಗಳಿಗೆ, ಹುಣಸೂರಿನ ನಗರಸಭೆಯ 31 ವಾರ್ಡ್ಗಳಿಗೆ, ಬೀರೂರು ಪುರಸಭೆಯ 23 ವಾರ್ಡ್, ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್, ಕುಂದಗೋಳ ಪಟ್ಟಣಪಂಚಾಯಿತಿಯ 19 ವಾರ್ಡ್, ಕಂಪ್ಲಿ ಮತ್ತು ಕೂಡ್ಲಿಗಿ ಸ್ಥಳೀಯ ಸಂಸ್ಥೆಯ 23 ಮತ್ತು 20 ವಾರ್ಡ್ಗಳಿಗೆ ಚುನಾವಣೆ ನಡೆಸಲು ಸಿದ್ದತೆ ಮಾಡಿಕೊಳ್ಳುವಂತೆ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.