ಬೆಂಗಳೂರು : ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅನರ್ಹ ಮತದಾರರ ಹೆಸರು ಸೇರಿಸಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಬಾರದು ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಮೌಖಿಕವಾಗಿ ಸೂಚಿಸಿದೆ.
ಈ ಕುರಿತು ಸಂಘಟನೆಯೊಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಡಿ.ಆರ್.ರವಿಶಂಕರ್ ವಾದಿಸಿ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಶಿಕ್ಷಕರಲ್ಲದ, ಕ್ಷೇತ್ರದಲ್ಲಿ ವಾಸಿಸದ ಮತ್ತು ಮತದಾರರಾಗಲು ನಿಗದಿತ ಸೇವಾವಧಿ ಪೂರೈಸದ ಶಿಕ್ಷಕರ ಹೆಸರುಗಳನ್ನು ಸೇರಿಸಲಾಗಿದೆ. ನಮಗಿರುವ ಮಾಹಿತಿ ಪ್ರಕಾರ ಅಂತಿಮ ಮತದಾರರ ಪಟ್ಟಿಯಲ್ಲಿ 3,500 ಮಂದಿ ಅನರ್ಹ ಮತದಾರರ ಹೆಸರು ಇವೆ. ಇನ್ನೂ ಮತದಾರರ ಪಟ್ಟಿಗೆ ನೋಂದಾಯಿಸಲು ಕೋರಿ ಸಲ್ಲಿಸಿರುವ 8 ಸಾವಿರ ಅರ್ಜಿಗಳನ್ನು ಪರಿಗಣಿಸಿಲ್ಲ. ಕೊನೆ ಕ್ಷಣದಲ್ಲಿ ಈ 8 ಸಾವಿರ ಅರ್ಜಿದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಸಾಧ್ಯತೆಯೂ ಇದೆ ಎಂದು ವಿವರಿಸಿದರು.