ಬೆಂಗಳೂರು: ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಟಾರ್ಗೆಟ್ ಮಾಡಿರುವುದಕ್ಕೆ ಪ್ರತಿಯಾಗಿ ಜಾತ್ಯತೀತ ಜನತಾ ದಳವು ಕೌಂಟರ್ ನೀಡಲು ಮುಂದಾಗಿದೆ. ಎರಡೂ ಪಕ್ಷಗಳ ಅತೃಪ್ತ ನಾಯಕರು ಮತ್ತು ಶಾಸಕರನ್ನು ಸೆಳೆಯಲು ಆಪರೇಷನ್ ಜೆಡಿಎಸ್ ಕಾರ್ಯಾಚರಣೆಯನ್ನು ತೆರೆಮರೆಯಲ್ಲಿ ನಡೆಸುತ್ತಿದೆ.
ದಕ್ಷಿಣ ಕರ್ನಾಟಕದಲ್ಲಿ ಬಲವಾಗಿ ಬೇರು ಬಿಟ್ಟಿರುವ ಜಾತ್ಯಾತೀತ ಜನತಾ ದಳವನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ತಂತ್ರಗಾರಿಕೆ ರೂಪಿಸತೊಡಗಿವೆ. ಜಾತ್ಯತೀತ ಜನತಾ ದಳದ ಗೆಲ್ಲುವ ಕುದುರೆಗಳನ್ನು ಸೆಳೆಯುವುದು ಮತ್ತು ಜೆಡಿಎಸ್ನ ಭದ್ರಕೋಟೆಯಲ್ಲಿ ಒಕ್ಕಲಿಗರ ಮತಗಳನ್ನು ವಿಭಜಿಸುವುದು ಎರಡೂ ರಾಷ್ಟ್ರೀಯ ಪಕ್ಷಗಳ ಚುನಾವಣೆ ರಾಜಕೀಯದ ತಂತ್ರಗಾರಿಕೆಯ ಭಾಗವಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆಶಿ, ದಳಪತಿಗಳ ಟಾರ್ಗೆಟ್: ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದರಾ ಮೋದಿ?
ಬಿಜೆಪಿ ಮತ್ತು ಕಾಂಗ್ರೆಸ್ ನಡೆಸುತ್ತಿರುವ ರಾಜಕಾರಣದ ಒಳಮರ್ಮ ಅರಿತಿರುವ ಜೆಡಿಎಸ್, ಬೇರೆ ಪಕ್ಷಗಳಿಗೆ ವಲಸೆ ಹೋಗಲು ಸಿದ್ಧವಾಗಿರುವ ಪಕ್ಷದ ಶಾಸಕರು ಮತ್ತು ನಾಯಕರನ್ನು ಸಂಧಾನ ನಡೆಸಿ ತನ್ನಲ್ಲೇ ಉಳಿಸಿಕೊಳ್ಳುವುದರ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ನ ಅತೃಪ್ತ ಮುಖಂಡರನ್ನು ಜೆಡಿಎಸ್ಗೆ ಸೇರಿಸಿಕೊಳ್ಳಲು ಬಲೆ ಬೀಸಿದೆ. ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ನಾಯಕರು, ಶಾಸಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಸದ್ದುಗದ್ದಲವಿಲ್ಲದೇ ಜೆಡಿಎಸ್ ನಡೆಸಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದ ಸಿಎಂ ಇಬ್ರಾಹಿಂ ಅವರನ್ನು ಪಕ್ಷದ ತೆಕ್ಕೆಗೆ ಸೇರಿಸಿಕೊಂಡಂತೆ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಅತೃಪ್ತರಾಗಿರುವ ಶಾಸಕರ ಹಾಗು ಮುಖಂಡರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡಿದೆ. ಎರಡೂ ಪಕ್ಷಗಳಲ್ಲಿ ಟಿಕೆಟ್ ವಂಚಿತರಾಗುವ ಮುಖಂಡರನ್ನು ಸಹ ಸ್ಥಳೀಯ ಕ್ಷೇತ್ರದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷಕ್ಕೆ ಸೇರಿಸಿಕೊಂಡು ವಿದಾನಸಭೆ ಚುನಾವಣೆಯಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.
ಜಾರಕಿಹೊಳಿ ಬ್ರದರ್ಸ್ಗೆ ಗಾಳ:ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಕಾರಣಕರ್ತರಾದ ಹಾಗು ಸಚಿವ ಸ್ಥಾನ ನೀಡದೇ ಬಿಜೆಪಿ ಹೈಕಮಾಂಡ್ ಸತಾಯಿಸುತ್ತಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರನ್ನು ಜೆಡಿಎಸ್ಗೆ ಸೇರಲು ಮಾಜಿ ಸಿಎಂ ಕುಮಾರಸ್ವಾಮಿ ಆಫರ್ ನೀಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಜೆಡಿಎಸ್ನ ವರಿಷ್ಠರು ಮತ್ತು ಜಾರಕಿಹೊಳಿ ಬ್ರದರ್ಸ್ ನಡುವೆ ಎರಡು ಮೂರು ಬಾರಿ ರಾಜಕೀಯ ಸಭೆಗಳು ಸಹ ನಡೆದಿವೆ ಎನ್ನಲಾಗ್ತಿದೆ.