ಬೆಂಗಳೂರು: ನಾಳೆ ಬೆಳಗ್ಗೆ ಏಳು ಗಂಟೆಯಿಂದ ಆರ್. ಆರ್. ನಗರದ ಉಪಚುನಾವಣೆಗೆ ಮತದಾನ ನಡೆಯಲಿದೆ. ಇದರಿಂದಾಗಿ ಚುನಾವಣಾ ಸಿಬ್ಬಂದಿಗಳು ಇಂದೇ ಮತಗಟ್ಟೆಗಳಿಗೆ ಇವಿಎಮ್, ವಿವಿ ಪ್ಯಾಟ್ ಗಳೊಂದಿಗೆ ತೆರಳಿದ್ದಾರೆ. ಅದೇ ರೀತಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಮಂಜುನಾಥ್ ಪ್ರಸಾದ್ ಜ್ಞಾನಾಕ್ಷಿ, ವಿದ್ಯಾನಿಕೇತನ್ ಶಾಲೆಯ ಮಸ್ಟರಿಂಗ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ 678 ತಂಡಗಳಲ್ಲಿ ಸಿಬ್ಬಂದಿಗಳು ಬಂದು ಮತ ಯಂತ್ರಗಳನ್ನು ತೆಗೆದುಕೊಂಡು ಮತಗಟ್ಟೆಗಳಿಗೆ ತೆರಳುತ್ತಿದ್ದಾರೆ. ಅಲ್ಲದೇ ಹೆಚ್ಚುವರಿಯಾಗಿ ಶೇ.ಇಪ್ಪತ್ತರಷ್ಟು ಚುನಾವಣಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಂಚಾರ ವ್ಯವಸ್ಥೆಗೆ 180 ವಾಹನಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಇದರಲ್ಲಿ ಈಗ ಚುನಾವಣಾ ಸಾಮಗ್ರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಿ ಮತಗಟ್ಟೆಗೆ ತೆರಳಿರುವ ಸಿಬ್ಬಂದಿ ಇಂದು ರಾತ್ರಿ ಅದೇ ಮತಗಟ್ಟೆಯಲ್ಲಿ ವಾಸ್ತವ್ಯ ಹೂಡಲಿದ್ದು, ಬೆಳಗ್ಗೆ ಆರು ಗಂಟೆಗೆ ಮತಗಟ್ಟೆ ತೆರೆಯಲಿದ್ದಾರೆ. ಪೋಲಿಂಗ್ ಏಜೆಂಟ್ಗಳಿಗೂ ಬೆಳಗ್ಗೆ ಆರು ಗಂಟೆಗೆ ಬರಲು ತಿಳಿಸಿದ್ದು, ಅವರ ಸಮ್ಮುಖದಲ್ಲಿ ಅಣಕು ಮತದಾನ ನಡೆಯಲಿದೆ. ಬೆಳಗ್ಗೆ ಏಳುಗಂಟೆಗೆ ಮತದಾನ ಆರಂಭವಾಗಿ ಸಂಜೆ ಆರು ಗಂಟೆವರೆಗೆ ಮುಗಿಯಲಿದೆ ಎಂದರು.