ಬೆಂಗಳೂರು: ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲೆ ಚರ್ಚೆಯಲ್ಲಿ ಎಲ್ಲಾ ಸದಸ್ಯರು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಚುನಾವಣಾ ಅಕ್ರಮಗಳ ಬಗ್ಗೆ ತಮ್ಮ ಆಕ್ಷೇಪ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯ ಹೆಚ್. ಕೆ ಪಾಟೀಲ್ ಚುನಾವಣೆ ಸುಧಾರಣೆ ಮೇಲಿನ ಚರ್ಚೆ ಆರಂಭಿಸುತ್ತಾ, ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು. ಮೊನ್ನೆ ಐದು ರಾಜ್ಯಗಳ ಚುನಾವಣೆ ನಡೆಯಿತು. ಜನ ಒಂದು ಪಕ್ಷಕ್ಕೆ ದೊಡ್ಡ ಬೆಂಬಲ ಕೊಟ್ರು. ಉತ್ತರ ಪ್ರದೇಶದಲ್ಲಿ ಮಂತ್ರಿ ಮಂಡಲ ಮಾಡಿದರು. 53 ಮಂತ್ರಿಗಳಲ್ಲಿ 22 ಮಂತ್ರಿಗಳು ಕ್ರಿಮಿನಲ್ ಕೇಸ್ ಉಳ್ಳವರಾಗಿರುತ್ತಾರೆ. ಇದರಿಂದ ಜನರಿಗೆ ಯಾವ ಅಭಿಪ್ರಾಯ ಬರುತ್ತೆ ನೀವೇ ಹೇಳಿ. ಇವಿಎಂ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಆದರೆ ಈ ಬಗ್ಗೆ ಚುನಾವಣಾ ಆಯೋಗ ಈ ಅನುಮಾನವನ್ನು ನಿವಾರಣೆ ಮಾಡುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡ ಶೃಂಗೇರಿ ಶಾಸಕ ರಾಜುಗೌಡ ಮಾತನಾಡುತ್ತಾ, ಶಾಸಕರು ಭ್ರಷ್ಟರಾಗಿದ್ದೇವೆ. ಅಧಿಕಾರಿಗಳನ್ನು ಭ್ರಷ್ಟರನ್ನಾಗಿ ಮಾಡಿದ್ದೇವೆ. ಮತ ಹಾಕೋ ಜನರನ್ನು ಭ್ರಷ್ಟರನ್ನಾಗಿ ಮಾಡಿದ್ದೇವೆ. ಈ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಚುನಾವಣೆಗಳು ಧರ್ಮದ ವಿಚಾರಗಳ ಮೇಲೆ ನಡೆಯುತ್ತಿವೆ. ಹಣವಿದ್ದವರು ಸದನಕ್ಕೆ ಬರುತ್ತಿದ್ದಾರೆ. ಇಂತಹ ಸನ್ನಿವೇಶ ಇರಬಾರದು. ಜನರು ಕೂಡ ಉತ್ತಮರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಶಾಸಕ ಲಿಂಗೇಶ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಚುನಾವಣೆಯಲ್ಲಿ ನಿಲ್ಲುವುದಕ್ಕೆ ಸಮಯ ಫಿಕ್ಸ್ ಮಾಡಬೇಕು. ಆಸ್ತಿ ಉಳಿಸಿಕೊಳ್ಳಲು ನೇರವಾಗಿ ಚುನಾವಣೆಗೆ ಬರುತ್ತಾರೆ. ನಿವೃತ್ತಿ ಆದ ಬಳಿಕ ಐದು ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದು. ಚುನಾವಣೆ ಬಳಿಕ ಒಂದು ಧರ್ಮದ ಮತಗಳು ಬೇಡ ಎಂದು ಹೇಳ್ತಾರೆ. ಹೀಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಎಂದು ಹೇಳಿಕೆ ಕೊಟ್ರು ಕ್ರಮ ತೆಗೆದುಕೊಳ್ಳುವುದಿಲ್ಲ. ಒಂದು ಪಕ್ಷ ಮುಸ್ಲಿಂರನ್ನ ವೋಲೈಕೆ ಮಾಡುತ್ತೆ. ಮತ್ತೊಂದು ಪಕ್ಷ ನಮಗೆ ಮುಸ್ಲಿಂ ಮತ ಬೇಡ ಎಂದು ಹೇಳ್ತಾರೆ.
ನಾನು ಮುಂದಿನ ಚುನಾವಣೆಗೆ ನಿಲ್ಲಬೇಕಾ, ಬೇಡ್ವಾ ಅನ್ನೋ ಭಯ ಶುರುವಾಗುತ್ತದೆ. ಭ್ರಷ್ಟಾಚಾರ ವ್ಯವಸ್ಥೆ ಭಯ ಶುರು ಮಾಡಿಸಿದೆ. ನಾನು ಶಾಸಕರ ಅನುದಾನದಲ್ಲಿ ಎರಡು ಲಕ್ಷ ರೂಪಾಯಿಯನ್ನು ದೇವಸ್ಥಾನಕ್ಕೆ ಕೊಟ್ರೆ, ನಾಲ್ಕು ಲಕ್ಷ ಖರ್ಚು ಮಾಡಿ ಜಾತ್ರೆ ಸಂದರ್ಭದಲ್ಲಿ ಹೆಲಿಕಾಪ್ಟರ್ ಅಲ್ಲಿ ಹೂ ಹಾಕ್ತಿದ್ದಾರೆ. ಅವರು ಮುಂದಿನ ಚುನಾವಣೆಯ ಅಭ್ಯರ್ಥಿ ಆಗಬೇಕು ಎಂದು ಓಡಾಡುತ್ತಿದ್ದಾರೆ. ಹಣ, ಹೆಂಡ ಕೊಡಬೇಕು. ಹೆಂಡ ಅಂದ್ರೆ ಬ್ರಾಂಡ್ ಇರೋದೇ ಕೊಡಬೇಕು. ಈ ವ್ಯವಸ್ಥೆ ಸರಿಪಡಿಸದಿದ್ರೆ ದೇಶದ ಭವಿಷ್ಯಕ್ಕೆ ಮಾರಕ ಎಂದು ಆತಂಕ ವ್ಯಕ್ತಪಡಿಸಿದರು.