ಬೆಂಗಳೂರು: ಆದಷ್ಟು ಬೇಗ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿಸಲಾಗುತ್ತದೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಪಪಡಿಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಯಾರು ಎನ್ನುವ ವಿಚಾರದಲ್ಲಿ ಈಗಷ್ಟೇ ಗೊಂದಲ ಮುಗಿದಿದೆ. ನಮ್ಮಲ್ಲೂ ಮುಂದಿನ ವಾರದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನ ಆಯ್ಕೆ ಮಾಡಲಾಗುತ್ತದೆ. ಅತಿ ಶೀಘ್ರದಲ್ಲೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ನಳಿನ್ ಕುಮಾರ್ ಕಟೀಲ್ ಅವರಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಪ್ರತಿಪಕ್ಷ ನಾಯಕ ಯಾರು ಎನ್ನುವ ವಿಚಾರಕ್ಕೆ ತೆರೆ ಬೀಳಲಿದೆ ಎಂದರು.
ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಕುರಿತು ಪರಾಮರ್ಶೆ ನಡೆಸಲಾಗುತ್ತದೆ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂದು ಚರ್ಚಿಸಿ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಆತ್ಮಾವಲೋಕನ ಸಭೆ ನಂತರ ಪ್ರತಿಪಕ್ಷವಾಗಿ ಯಾವ ರೀತಿ ಪುಟಿದೇಳಲಿದೆ ಎನ್ನುವುದನ್ನು ಕಾದು ನೋಡಿ ಎಂದು ಬೊಮ್ಮಾಯಿ ಹೇಳಿದರು.
ಚುನಾವಣೆಗೆ ಮೊದಲೇ ಕಾಂಗ್ರೆಸ್ ಪಾಳಯದಲ್ಲಿ ಇದ್ದ, ಗೆದ್ದರೆ ಸಿಎಂ ಯಾರು ಎನ್ನುವ ಚರ್ಚೆ, ಮೇ 13 ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ 135 ಸ್ಥಾನಗಳನ್ನು ಗೆದ್ದು ಭರ್ಜರಿ ಜಯಗೊಂಡ ನಂತರ ಇನ್ನಷ್ಟು ಹೆಚ್ಚಾಗಿತ್ತು. ದೀರ್ಘವಾದ ಹಗ್ಗಜಗ್ಗಾಟದ ನಂತರ ಇದೀಗಷ್ಟೆ ಕಾಂಗ್ರೆಸ್ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರನ್ನು ಅಂತಿಮಗೊಳಿಸಿದೆ. ಆದರೆ ಅತ್ತ ಕಾಂಗ್ರೆಸ್ನಲ್ಲಿ ಸಿಎಂ ಯಾರು ಎನ್ನುವುದು ಫೈನಲ್ ಆಗುತ್ತಿದ್ದಂತೆ, ಇತ್ತ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಬಿಜೆಪಿಯಲ್ಲಿ ವಿಪಕ್ಷ ನಾಯಕ ಆಯ್ಕೆಯ ಚರ್ಚೆ ಅಧಿಕವಾಗಿದೆ.
ಇದುವರೆಗೆ ಮುಖ್ಯಮಂತ್ರಿಯಾಗಿದ್ದು, ಈಗ ಹಂಗಾಮಿ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರನ್ನೇ ಕೆಲಕಾಲ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗುವುದು ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿಬರುತ್ತಿವೆ. ಆದರೆ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳಿದ್ದಂತೆಯೇ ಬಿಜೆಪಿಯಲ್ಲೂ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ಬಿಜಿಪಿ ಹಿರಿಯ ನಾಯಕರ ಮನೆ ಬಾಗಿಲನ್ನು ತಟ್ಟಿಯೂ ಆಗಿದೆ. ವಿಪಕ್ಷ ನಾಯಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಶಾಸಕರಾದ ಸುನೀಲ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಹೆಸರುಗಳೂ ಚಾಲ್ತಿಯಲ್ಲಿವೆ.
ಯಾರಾಗ್ತಾರೆ ನಿಮ್ಮಲ್ಲಿ ಪ್ರತಿಪಕ್ಷ ನಾಯಕ ಎನ್ನುವ ಪ್ರಶ್ನೆಗೆ ಬಿಜೆಪಿ, ನಾವು ವಿರೋಧ ಪಕ್ಷದ ನಾಯಕನ ಹೆಸರನ್ನು ಘೋಷಣೆ ಮಾಡಲು ತಯಾರಿದ್ದೇವೆ. ಮೊದಲು ಕಾಂಗ್ರೆಸ್ನವರು ಸಿಎಂ ಯಾರೆಂಬುದನ್ನು ಘೋಷಣೆ ಮಾಡಲಿ ಎಂದು ಹೇಳಿದ್ದರು. ಈಗ ರಾಜ್ಯದ ಸಿಎಂ ಯಾರೆಂಬುದು ಅಧಿಕೃತ ಘೋಷಣೆಯಾಗಿದೆ. ಇನ್ನು ಬಿಜೆಪಿಯವರು ಪ್ರತಿಪಕ್ಷದ ನಾಯಕ ಯಾರು ಎನ್ನುವ ಕುತೂಹಲಕ್ಕೆ ತೆರೆ ಎಳೆಯುವುದಷ್ಟೇ ಬಾಕಿ ಇದೆ.
ಇದನ್ನೂ ಓದಿ:ಸಿಎಂ ಆಯ್ಕೆ ಪ್ರಹಸನ ಮುಕ್ತಾಯ: ಡಿಕೆಶಿ, ಸಿದ್ದು ಕೈ ಮೇಲೆತ್ತಿ ಖರ್ಗೆ ಒಗ್ಗಟ್ಟು ಪ್ರದರ್ಶನ