ಬೆಂಗಳೂರು:ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಏ.12ರವರೆಗಿನ ಅಂಕಿ ಅಂಶ ಗಮನಿಸಿದಾಗ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು 55,06,70,204ರೂ. ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 30,23,28,775 ರೂ. ಮೌಲ್ಯದ 6,55,738 ಲೀಟರ್ ಮದ್ಯ ವಶಪಡಿಸಿಕೊಂಡಿವೆ.
13,06,84,276/- ಮೌಲ್ಯದ 558.30 ಕೆ.ಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿವೆ. ಬಾಳುವ ಲೋಹಗಳನ್ನು ಗಮನಿಸಿದರೆ 53.28 ಕೆಜಿ ತೂಕದ ಚಿನ್ನ ವಶಪಡಿಸಿಕೊಂಡಿದ್ದು ಇದರ ಮೌಲ್ಯ 21,27,39,747 ರೂ. ವಶಪಡಿಸಿಕೊಳ್ಳಲಾಗಿದೆ. 427.07 ಕೆಜಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇದರ ಮೊತ್ತ 23,83,22,844 ರೂ. ಆಗಿದೆ.
ಪ್ರಕರಣ ದಾಖಲು:ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 1,119 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 63,340 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ, 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 17 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆಪಿಸಿ ಕಾಯ್ದೆಯಡಿ 3,116 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 4,740 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ.
ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ 8,145 ಜಾಮೀನು ರಹಿತ ವಾರೆಂಟ್ಗಳನ್ನು ಜಾರಿಗೊಳಿಸಲಾಗಿದೆ. ಅಬಕಾರಿ ಇಲಾಖೆಯು 1,329 ಗಂಭೀರ ಪ್ರಕರಣಗಳನ್ನು ಹಾಗೂ 94 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣಗಳು, 51 ಎನ್ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 4,716 ಪ್ರಕರಣಗಳನ್ನು ದಾಖಲಿಸಿದೆ, ಮತ್ತು 870 ವಿವಿಧ ಮಾದರಿಯ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.