ಬೆಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಅಹರ್ನಿಶಿ ಕಾರ್ಯನಿರ್ವಹಿಸುತ್ತಿರುವ ವಿವಿಧ ತನಿಖಾ ಸಂಸ್ಥೆಗಳ ಪೈಕಿ ಆದಾಯ ತೆರಿಗೆ ಇಲಾಖೆ 15.53 ಕೋಟಿ ರೂ. ನಗದು ಮತ್ತು 7.08 ಕೋಟಿ ರೂ. ಮೌಲ್ಯದ 10.14 ಕೆಜಿ ಚಿನ್ನವನ್ನು ಶನಿವಾರ ವಶಪಡಿಸಿಕೊಂಡಿದೆ.
ಶಿವಾಜಿನಗರ ಕ್ಷೇತ್ರದಲ್ಲಿ 4.77 ಕೋಟಿ ರೂ., ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 3.44 ಕೋಟಿ, ಮಲ್ಲೇಶ್ವರ ಕ್ಷೇತ್ರದಲ್ಲಿ 3.35 ಕೋಟಿ, ಪುಲಿಕೇಶಿನಗರ ಕ್ಷೇತ್ರದಲ್ಲಿ 2.30 ಕೋಟಿ, ಶಾಂತಿನಗರ ಕ್ಷೇತ್ರದಲ್ಲಿ 62.83 ಲಕ್ಷ, ಗಾಂಧಿನಗರ ಕ್ಷೇತ್ರದಲ್ಲಿ 55 ಲಕ್ಷ, ರಾಯಚೂರು ಕ್ಷೇತ್ರದಲ್ಲಿ 30 ಲಕ್ಷ, ಹೆಬ್ಬಾಳ, ಶಿವಾಜಿನಗರ, ಚಿಕ್ಕಪೇಟೆ, ಜಯನಗರ ಕ್ಷೇತ್ರದಲ್ಲಿ 23.50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಶಾಂತಿನಗರ, ಹೆಬ್ಬಾಳ, ಗಾಂಧಿನಗರ ಕ್ಷೇತ್ರದಲ್ಲಿ 5 ಕೋಟಿ ರೂ. ಮೌಲ್ಯದ 6.59 ಕೆಜಿ ಚಿನ್ನ ಮತ್ತು ರಾಯಚೂರು ಕ್ಷೇತ್ರದಲ್ಲಿ 2.08 ಕೋಟಿ ರೂ. ಮೌಲ್ಯದ 3.55 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಈ ವರೆಗೆ 138.55 ಕೋಟಿ ನಗದು ಜಪ್ತಿ:ರಾಜ್ಯ ವಿಧಾನಸಭೆ ಚುನಾವಣೆನೀತಿ ಸಂಹಿತೆ ಜಾರಿ ನಂತರ ಇಲ್ಲಿಯರೆಗೆ ಒಟ್ಟು 138.55 ಕೋಟಿ ರೂ. ನಗದು, 23.66 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ವಶಕ್ಕೆ ಪಡೆಯಲಾಗಿದೆ. 82.65 ಕೋಟಿ ರೂ. ಮೌಲ್ಯದ 21.91 ಲಕ್ಷ ಲೀಟರ್ ಮದ್ಯ, 23.09 ಕೋಟಿ ರೂ. ಮೌಲ್ಯದ 1,899 ಕೆಜಿ ಮಾದಕ ವಸ್ತುಗಳು, 92.61 ಕೋಟಿ ರೂ. ಮೌಲ್ಯದ 177.95 ಕೆಜಿ ಚಿನ್ನ, 4.62 ಕೋಟಿ ರೂ. ಮೌಲ್ಯದ 667.08 ಕೆಜಿ ಬೆಳ್ಳಿ ಜಪ್ತಿಯಾಗಿದೆ. ಒಟ್ಟು 97.24 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಹಾಗು ನಗದು, ಮದ್ಯ ಸೇರಿದಂತೆ ಒಟ್ಟು 365.22 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 2,746 ಎಫ್‌ಐಆರ್, 69,864 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,741 ಪ್ರಕರಣಗಳನ್ನು ದಾಖಲಿಸಲಾಗಿದೆ. 11,748 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 17,012 ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ.
ಮುಧೋಳದಲ್ಲಿ ₹5 ಕೋಟಿ ಹಣ ಜಪ್ತಿ:ಜಿಲ್ಲೆಯ ಮುಧೋಳ ಮತಕ್ಷೇತ್ರದ ಲಕ್ಷಾನಟ್ಟಿ ಚೆಕ್ಪೋಸ್ಟ್ ಬಳಿ ಅಧಿಕಾರಿಗಳು ಶನಿವಾರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 5 ಕೋಟಿ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿಯಿಂದ ಮುಧೋಳಕ್ಕೆ ತೆರಳುತ್ತಿದ್ದ ವಾಹನವನ್ನು ಎಸ್ಎಸ್ಟಿ ತಂಡ ಪರಿಶೀಲನೆ ನಡೆಸಿದಾಗ ವಾಹನದಲ್ಲಿದ್ದ ವ್ಯಕ್ತಿ ಹಣ ಯೂನಿಯನ್ ಬ್ಯಾಂಕ್ಗೆ ಸೇರಿದೆ ಎಂದಿದ್ದಾರೆ. ಆದರೆ ವ್ಯಕ್ತಿಯ ಹೆಸರು, ಹುದ್ದೆ ಹಾಗೂ ಚಾಲಕ, ಬ್ಯಾಂಕ್ ಟ್ಯಾಗ್ಸ್ ಹಾಗೂ ಬ್ಯಾಂಕ್ ಕೋಡ್ ಸೇರಿದಂತೆ ಇತರೆ ದಾಖಲೆಗಳು ಕಂಡುಬಾರದ ಕಾರಣ ಹಣ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:ಖರ್ಗೆ ಕುಟುಂಬ ಹತ್ಯೆ ಆಡಿಯೋ ಆರೋಪ: ಸೈಬರ್ ಕ್ರೈಂಗೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ದೂರು