ಕರ್ನಾಟಕ

karnataka

ETV Bharat / state

ಕೆಲವೇ ಕ್ಷಣಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ - Karnataka Assembly poll

ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಇಂದು ಬೆಳಗ್ಗೆ ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಕೈಗೊಂಡಿದೆ. ದಿನಾಂಕ ಪ್ರಕಟವಾದ ಬಳಿಕ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ
ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ

By

Published : Mar 29, 2023, 8:55 AM IST

Updated : Mar 29, 2023, 12:01 PM IST

ನವದೆಹಲಿ:ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಇಂದು ಬೆಳಗ್ಗೆ 11.30ಕ್ಕೆ ಪ್ರಕಟಿಸಲಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿ ಮೇ 24 ರಂದು ಕೊನೆಗೊಳ್ಳಲಿದೆ. ಅಧಿಕಾರದಲ್ಲಿರುವ ಬಿಜೆಪಿ 40 ಪರ್ಸೆಂಟೇಜ್​ ಕಮಿಷನ್​, ಮೀಸಲಾತಿ ಕಿಚ್ಚಿಗೆ ತುತ್ತಾಗಿದ್ದರೆ, ಇತ್ತ ಕಾಂಗ್ರೆಸ್​ ಈ ಬಾರಿ ಅಧಿಕಾರ ಸ್ಥಾಪನೆಗೆ ಸಿದ್ಧತೆ ನಡೆಸಿದೆ. ಕೇಸರಿ ಪಕ್ಷದ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರುವ ತಂತ್ರ ರೂಪಿಸಿದೆ.

ಚುನಾವಣಾ ವೇಳಾಪಟ್ಟಿ ರಚನೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಈಗಾಗಲೇ ಕರ್ನಾಟಕಕ್ಕೆ ಭೇಟಿ ನೀಡಿ ಅಗತ್ಯ ಸಿದ್ಧತೆ ಕೈಗೊಂಡಿದ್ದರು. ಶೀಘ್ರದಲ್ಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದ್ದು, ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಲಾಗಿತ್ತು. ಮೇ 5 ರೊಳಗೆ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ತಿಳಿದಿತ್ತಾದರೂ, ಆಯೋಗ ಇಂದೇ ಭಿತ್ತರಿಸಲು ಮುಂದಾಗಿದೆ. ಇಂದು ದಿನಾಂಕ ಘೋಷಣೆಯಾದ ಬಳಿಕ ಸಂಜೆಯಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ.

ಮಹತ್ವದ ಅಂಶಗಳು:

- 224 ಸದಸ್ಯರನ್ನು ಹೊಂದಿರುವ ಕರ್ನಾಟಕ ವಿಧಾನಸಭೆಯ ಅವಧಿ ಮೇ 24 ಮುಗಿಯುತ್ತಿದೆ.

- ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಂಭವವಿದೆ.

- ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.

- ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕ್ರಮವಾಗಿ 124 ಮತ್ತು 93 ಅಭ್ಯರ್ಥಿಗಳನ್ನು ಹೊಂದಿರುವ ಮೊದಲ ಪಟ್ಟಿ ಬಿಡುಗಡೆ ಮಾಡಿವೆ.

- ಕಳೆದ ವಾರ ಎರಡು ಹೊಸ ಕೆಟಗರಿ ಮೂಲಕ ಲಿಂಗಾಯತ ಮತ್ತು ಒಕ್ಕಲಿಗರಿಗೆ ಶಿಕ್ಷಣ ಮತ್ತು ಮೀಸಲಾತಿಯಲ್ಲಿ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ ಮೀಸಲಾತಿ ಘೋಷಿಸಿದೆ. ಚುನಾವಣೆಯಲ್ಲಿ ಇದು ಮಹತ್ವದ ವಿಚಾರವಾಗಬಹುದು.

ಕೈ ಅಭ್ಯರ್ಥಿಗಳ ಪಟ್ಟಿ: ಮುಂಬರುವ ಚುನಾವಣೆಗೆ ಕಾಂಗ್ರೆಸ್ ಪಕ್ಷವು 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. 124 ಅಭ್ಯರ್ಥಿಗಳ ಪೈಕಿ ಅರ್ಧದಷ್ಟು ಮಂದಿ ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹೆಚ್ಚಿನ ಸ್ಥಾನ ನೀಡಲಾಗಿದೆ. ಘೋಷಿತ ಪಟ್ಟಿಯಲ್ಲಿ ದಲಿತರು ಮತ್ತು ಆದಿವಾಸಿಗಳು ಎರಡಂಕಿಯ ಕ್ಷೇತ್ರಗಳಲ್ಲಿದ್ದಾರೆ. ಪ್ರಸ್ತುತ ವಿಧಾನಸಭೆಯ 70 ಹಾಲಿ ಶಾಸಕರ ಪೈಕಿ ಒಂಬತ್ತು ಮಂದಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್​ ಸಿಕ್ಕಿಲ್ಲ.

ಮುಗಿದ ಆಯ್ಕೆ ಗೊಂದಲ:ತೀವ್ರ ಕುತೂಹಲ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಗೊಂದಲ ಕೊನೆಗೂ ಬಗೆಹರಿದಿದ್ದು, ಹಳೆಯ ಕ್ಷೇತ್ರ ವರುಣಾದಿಂದಲೇ ಅವರು ಸ್ಪರ್ಧಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕನಕಪುರದಿಂದ ಕಣಕ್ಕಿಳಿಯಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಚಿತ್ತಾಪುರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯಾ ರೆಡ್ಡಿ ಕ್ರಮವಾಗಿ ಬಿಟಿಎಂ ಲೇಔಟ್ ಮತ್ತು ಜಯನಗರದಿಂದ ಚುನಾವಣಾ ಸ್ಪರ್ಧೆಗೆ ಇಳಿಯಲಿದ್ದಾರೆ.

ಇನ್ನು, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ದಾವಣಗೆರೆ ಉತ್ತರ ಕ್ಷೇತ್ರದಿಂದ ನಿಂತರೆ, ತಂದೆ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ದೇವನಹಳ್ಳಿ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಕಣಕ್ಕಿಳಿಯಲಿದ್ದು, ಕೆಜಿಎಫ್‌ನಿಂದ ಅವರ ಪುತ್ರಿ ರೂಪಾ ಶಶಿಧರ್ (ರೂಪಕಲಾ ಎಂ) ಅದೃಷ್ಟ ಪರೀಕ್ಷೆಗೆ ಧುಮುಕಲಿದ್ದಾರೆ.

ಇತ್ತೀಚೆಗಷ್ಟೇ ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಅವಕಾಶ ನೀಡಲಾಗಿದೆ. ನಂಜನಗೂಡು (ಮೀಸಲು-ಎಸ್‌ಸಿ) ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಕಲಬುರ್ಗಿ ಜಿಲ್ಲೆಯ ಅಫಜಲಪುರಕ್ಕೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಹಾಲಿ ಶಾಸಕ ಎಂ.ವೈ.ಪಾಟೀಲ್ ತಮ್ಮ ಪುತ್ರನಿಗೆ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದ್ದು, ಹಾಲಿ ಶಾಸಕರೆಲ್ಲರೂ ಟಿಕೆಟ್ ಪಡೆದಿದ್ದಾರೆ.

ಬಿಜೆಪಿ ತಂತ್ರವೇನು?:ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ, ಒಳಮೀಸಲಾತಿಯನ್ನು ಪರಿಷ್ಕರಿಸಿರುವ ಬಿಜೆಪಿ ಚುನಾವಣಾ ತಂತ್ರ ಎಣೆದಿದೆ. ಮುಸ್ಲಿಂ ಪ್ರಾತಿನಿಧ್ಯದ ಮೀಸಲಿಗೆ ಕತ್ತರಿ ಹಾಕಿ ಅದನ್ನು ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿದೆ. ಇದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಒಳಮೀಸಲಿಗೂ ಆಕ್ರೋಶ ವ್ಯಕ್ತವಾಗಿದ್ದು, ಬಂಜಾರ ಸಮುದಾಯ ಸೇರಿದಂತೆ ಹಲವರು ರಾಜ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.

ಇದನ್ನೂ ಓದಿ:ಕರ್ನಾಟಕ ಇಡೀ ದೇಶದಲ್ಲಿ ಹೆಚ್ಚು ಏರ್ಪೋರ್ಟ್ ಹೊಂದಿರುವ ರಾಜ್ಯ: ಸಚಿವ ಸಿಂಧಿಯಾ

Last Updated : Mar 29, 2023, 12:01 PM IST

ABOUT THE AUTHOR

...view details