ಬೆಂಗಳೂರು:ಚಿಲುಮೆ ಸಂಸ್ಥೆಯಿಂದ ಮತದಾರರ ಪರಿಷ್ಕರಣೆಗಾಗಿ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಅವರನ್ನು ಅಮಾನತುಗೊಳಿಸಲು ಭಾರತೀಯ ಚುನಾವಣೆ ಆಯೋಗ ಸೂಚನೆ ನೀಡಿದೆ. ಚುನಾವಣಾ ಆಯೋಗವು ಪ್ರಕರಣ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಖಡಕ್ ನಿರ್ದೇಶನಗಳನ್ನು ನೀಡಿದೆ.
ಶಿವಾಜಿನಗರ ಹಾಗೂ ಚಿಕ್ಕಪೇಟೆ ಕ್ಷೇತ್ರದ ಉಸ್ತುವಾರಿಯಾಗಿದ್ದ ಬಿಬಿಎಂಪಿ (ಕೇಂದ್ರ) ಅಪರ ಜಿಲ್ಲಾ ಚುನಾವಣಾಧಿಕಾರಿ ಎಸ್.ರಂಗಪ್ಪ ಮತ್ತು ಮಹದೇವಪುರ ಕ್ಷೇತ್ರದ ಉಸ್ತುವಾರಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರನ್ನು ಕೂಡಲೇ ಅಮಾನತುಗೊಳಿಸಲು ಸೂಚನೆ ನೀಡಿದೆ. ಜೊತೆಗೆ ಈ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಲು ನಿರ್ದೇಶಿಸಿದೆ.
ಶಿವಾಜಿನಗರ, ಚಿಕ್ಕಪೇಟೆ, ಮಹದೇಪುರ ಕ್ಷೇತ್ರದಲ್ಲಿನ ಮತಪಟ್ಟಿಯಲ್ಲಿನ ಸೇರ್ಪಡೆ ಹಾಗೂ ಡಿಲೀಟ್ ಬಗ್ಗೆ 100% ತಪಾಸಣೆ ಮಾಡಲು ಸೂಚನೆ ನೀಡಿದೆ. ಈ ಮೂರು ಕ್ಷೇತ್ರಗಳಲ್ಲಿ ಮತಪರಿಷ್ಕರಣಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿ.24ರವರೆಗೆ ಇನ್ನೂ 15 ದಿನಗಳ ಕಾಲ ಅವಧಿ ವಿಸ್ತರಣೆ ಮಾಡಿ ಆದೇಶಿಸಿದೆ.
ಇನ್ನು ಮತಪರಿಷ್ಕರಣೆ ಮೇಲೆ ನಿಗಾ ಇರಿಸಲು ಮೂವರು ಐಎಎಸ್ ಅಧಿಕಾರಿಗಳ ನೇಮಕ ಮಾಡಿದೆ. ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಚಿಕ್ಕಪೇಟೆ ಕ್ಷೇತ್ರಕ್ಕೆ ಡಾ.ಆರ್.ವಿಶಾಲ್, ಮಹದೇವಪುರಕ್ಕೆ ಅಜಯ್ ನಾಗಭೂಷಣ್ ಅವರನ್ನು ನೇಮಕ ಮಾಡಿದೆ. ಕಾನೂನುಬಾಹಿರವಾಗಿ ಸಂಗ್ರಹಿಸಲಾದ ಮಾಹಿತಿಯನ್ನು ನೇರವಾಗಿ, ಪರೋಕ್ಷವಾಗಿ ಬಳಸದಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.