ಬೆಂಗಳೂರು: ರಾಜ್ಯದಲ್ಲಿ ಚುನಾವಣೆಯಲ್ಲಿ ಈ ಬಾರಿ ಕುರುಡು ಕಾಂಚಾಣದ ಕುಣಿತ ಜೋರಾಗಿದೆ. ಅಕ್ರಮ ನಗದು, ಮದ್ಯ, ವಸ್ತುಗಳ ಜಪ್ತಿ ಮೊತ್ತ 150 ಕೋಟಿ ರೂ. ಗಡಿ ದಾಟಿ 161.66 ಕೋಟಿ ರೂ.ಗೆ ತಲುಪಿದೆ. ಮಾರ್ಚ್ 29ರಿಂದ ಇಲ್ಲಿವರೆಗೆ ಚುನಾವಣಾ ಆಯೋಗ 161.66 ಕೋಟಿ ರೂ. ನಗದು, ಮದ್ಯ, ವಸ್ತುಗಳನ್ನು ವಶಕ್ಕೆ ಪಡೆದಿದೆ.
ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ಅಕ್ರಮ ನಗದು, ಮದ್ಯ, ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಒಟ್ಟು ಜಪ್ತಿ ಮಾಡಿದ ನಗದು 67.34 ಕೋಟಿ ರೂ. ಫ್ರೀಬೀಸ್ ಗಳ ಮೌಲ್ಯ 18.44 ಕೋಟಿ ರೂ., ಮದ್ಯ 33.91 ಕೋಟಿ ರೂ. ಮೊತ್ತ, ಡ್ರಗ್ಸ್ ಮತ್ತು ಮಾದಕ ವಸ್ತುಗಳ ಮೊತ್ತ 13.35 ಕೋಟಿ ರೂ., ಚಿನ್ನ 26 ಕೋಟಿ ರೂ., ಬೆಳ್ಳಿ ವಸ್ತುಗಳು 2.59 ಕೋಟಿ ರೂ. ಆಗಿದೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು ರೂ. 67.34 ಕೋಟಿ ರೂ. ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 33.91 ಕೋಟಿ ರೂ. ಮೌಲ್ಯದ 7,97,625 ಲೀಟರ್ ಮದ್ಯ ವಶಪಡಿಸಿಕೊಂಡಿವೆ.