ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಮೇ 10 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಿಗದಿಯಾಗಿದೆ. ಚುನಾವಣಾ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. 'ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ' ಎಂಬ ಚುನಾವಣಾ ಆಯೋಗದ ಧ್ಯೇಯ ವಾಕ್ಯದಂತೆ ಪ್ರತಿ ನಾಗರಿಕನೂ ತನ್ನ ಅಮೂಲ್ಯ ಮತವನ್ನು ಚಲಾಯಿಸಬೇಕು ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ರಾಜ್ಯದ ಜನತೆಗೆ ಕರೆ ನೀಡಿದರು.
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಅಂಚೆ ಇಲಾಖೆ ಜಂಟಿಯಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಲೋಕಾರ್ಪಣೆ ಮಾಡಲಾಯಿತು. ಬಳಿಕ ಗಾಯಕ ವಿಜಯ್ ಪ್ರಕಾಶ್ ಅವರು ಸಂಗೀತ ಸಂಯೋಜಿಸಿ ಹಾಡಿರುವ ಚುನಾವಣಾ ಜಾಗೃತಿ ಗೀತೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮನೋಜ್ ಕುಮಾರ್ ಮೀನಾ, "ಬದಲಾದ ಕಾಲಕ್ಕೆ ತಕ್ಕಂತೆ ಭಾರತ ಚುನಾವಣಾ ಆಯೋಗ ಸಹ ಹಲವು ವಿನೂತನ ಮತದಾರರ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮತದಾನದ ದಿನದಂದು ಮತದಾರರ ಅನುಕೂಲಕ್ಕಾಗಿ 'ಚುನಾವಣಾ ಆ್ಯಪ್' ಅಭಿವೃದ್ಧಿಪಡಿಸಲಾಗಿದೆ. ಮತದಾರರು ಹೆಚ್ಚು ಬಳಸುವ ಮೂಲಕ ಸುಲಭವಾಗಿ ಮತದಾನದಲ್ಲಿ ಭಾಗವಹಿಸಬಹುದು" ಎಂದರು.
ಹಲವು ಜಾಗೃತಿ ಕಾರ್ಯಕ್ರಮ:ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಿ, ನೈತಿಕ ಚುನಾವಣೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೊರತಂದಿರುವ ಸಿ-ವಿಜಿಲ್, ಸುವಿಧಾ ಆ್ಯಪ್ಗಳಿಗೆ ಉತ್ತಮ ಜನಸ್ಪಂದನೆ ದೊರೆತಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿರುವ ಚುನಾವಣಾ ಆಯೋಗದ ಈ ಕ್ರಮವನ್ನು ಅನೇಕ ಹಿರಿಯರು ಶ್ಲಾಘಿಸಿದ್ದಾರೆ. ವಯೋವೃದ್ಧರಾದರೂ ಮತದಾನದ ಜವಾಬ್ದಾರಿಯನ್ನು ಮೆರೆದು ಯುವ ಮತದಾರರಿಗೆ ಸ್ಪೂರ್ತಿಯಾಗಿದ್ದಾರೆ.
ನಗರ ಹಾಗೂ ಯುವ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ವೋಟರ್ ಫೆಸ್ಟ್, ಎಲೆಕ್ಥಾನ್ ಹಾಗೂ ನಮ್ಮ ನಡೆ ಮತಗಟ್ಟೆ ಕಡೆಯಂತಹ ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಮತದಾರರ ಅನುಕೂಲಕ್ಕಾಗಿ ಭಾರತ ಚುನಾವಣಾ ಆಯೋಗ ಹಲವು ಆ್ಯಪ್ಗಳನ್ನು ಹೊರ ತಂದಿದೆ ಮತ್ತು ಸಹಾಯವಾಣಿ 1950 ಕಾರ್ಯ ನಿರ್ವಹಿಸುತ್ತಿದೆ. ಮತದಾನವನ್ನು ಹೆಚ್ಚಿಸುವ ಉದ್ದೇಶವನ್ನು ಸಾಕಾರಗೊಳಿಸಲು ಮುಖ್ಯ ಚುನಾವಣಾಧಿಕಾರಿಗಳ ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
'ಚುನಾವಣಾ ಆ್ಯಪ್':ಚುನಾವಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಜನರಿಗೆ ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ 'ಚುನಾವಣಾ ಆ್ಯಪ್' ಸಿದ್ಧಪಡಿಸಲಾಗಿದೆ. ಮತದಾರರ ಮತಗಟ್ಟೆಯ ವಿವರ, ಅಭ್ಯರ್ಥಿಗಳ ವಿವರ, ಚುನಾವಣಾ ವೇಳಾ ಪಟ್ಟಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ವೀಲ್ ಚೇರ್ ವ್ಯವಸ್ಥೆ, ಮತದಾನದ ಪ್ರಮಾಣ, ಮತಗಟ್ಟೆಯ ಸುತ್ತಮುತ್ತಲಿನ ಆಸ್ಪತ್ರೆ, ಪೊಲೀಸ್ ಠಾಣೆ ವಿವರ ಸೇರಿದಂತೆ ಎಲ್ಲ ಉಪಯುಕ್ತ ಮಾಹಿತಿಗಳನ್ನು ಒಂದೇ ಆ್ಯಪ್ ನಲ್ಲಿ ದೊರೆಯುತ್ತಿದೆ. ಈ ಆ್ಯಪ್ನ್ನು ಚುನಾವಣೆಯ ನಂತರ ಸಹ ತಮ್ಮ ಹತ್ತಿರದ ಪೊಲೀಸ್ ಠಾಣೆ ಹಾಗೂ ಆರೋಗ್ಯ ಕೇಂದ್ರಗಳ ಮಾಹಿತಿ ಪಡೆಯಲು ಜನರು ಬಳಸಬಹುದು.
ವಿಶೇಷ ಅಂಚೆ ಲಕೋಟೆ: "ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಯನ್ನು ಹೊರತರಲಾಗಿದೆ. ಅದೇ ರೀತಿಯಲ್ಲಿ ಯುವ ಮತದಾರರನ್ನು ಪ್ರೇರೇಪಿಸಲು ಖ್ಯಾತ ಗಾಯಕ ವಿಜಯಪ್ರಕಾಶ್ ಅವರ ಗಾಯನ ಹಾಗೂ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಚುನಾವಣಾ ಜಾಗೃತಿ ಗೀತೆ ಸುಂದರವಾಗಿ ಮೂಡಿ ಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಮತಗಟ್ಟೆಯತ್ತ ಸೆಳೆಯಲಿದೆ" ಎಂದು ಹೇಳಿದರು.
ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್, "ಯಾವುದೇ ಸಂದೇಶವನ್ನು ಪದೇ ಪದೇ ಹೇಳುವುದರಿಂದ ಅದು ಹೆಚ್ಚಿನ ಪರಿಣಾಮ ಬೀರುತ್ತದೆ. ಅಂಚೆ ಇಲಾಖೆಯ ಫ್ರಾಂಕಿಂಗ್ ಮಷಿನ್‌ಗಳಲ್ಲಿ ಮೇ 10 ರಂದು ತಪ್ಪದೇ ಮತ ಚಲಾಯಿಸಬೇಕು ಎಂಬ ಸಂದೇಶವನ್ನು ಮುದ್ರಿಸಲಾಗುತ್ತಿದೆ" ಎಂದು ತಿಳಿಸಿದರು.
ಚುನಾವಣಾ ಜಾಗೃತಿ ಗೀತೆಯನ್ನು ಹಾಡಿರುವ ವಿಜಯ್ ಪ್ರಕಾಶ್ ಅಮೆರಿಕ ಪ್ರವಾಸದಲ್ಲಿದ್ದು ಆನ್ ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. "ಸಂಗೀತದ ಮೂಲಕ ಮತದಾನಕ್ಕೆ ಪ್ರೋತ್ಸಾಹಿಸುವ ಇಂತಹ ಸಾರ್ಥಕ ಕಾರ್ಯದಲ್ಲಿ ತೊಡಗುವುದು ಕಲಾವಿದನಾಗಿ ತನ್ನ ಕರ್ತವ್ಯ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಅರ್ಥಪೂರ್ಣವಾಗಿ ಮೂಡಿಬಂದ ಈ ಗೀತೆ ಜನರಲ್ಲಿ ಮತದಾನ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಹೆಚ್ಚಿನ ಜನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವಂತಾಗಲಿ" ಎಂದು ಆಶಿಸಿದರು.
ಚುನಾವಣಾ ಜಾಗೃತಿ ಗೀತೆಗೆ ಸಾಹಿತ್ಯ ಬರೆದಿರುವ ಖ್ಯಾತ ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ಮಾತನಾಡಿ, "ಹಾಡುಗಳು ಈ ನಮ್ಮ ಭಾರತೀಯ ಸಮಾಜದಲ್ಲಿ ತನ್ನದೇ ಆದ ಪರಿಣಾಮವನ್ನು ಬೀರುತ್ತವೆ. ಹಾಡು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಮತದಾನ ಜಾಗೃತಿಗಾಗಿ ರಚಿಸಲಾಗಿರುವ ಹಾಡು ಮತದಾರರನ್ನು ಮತ ಚಲಾಯಿಸಲು ಪ್ರೇರೇಪಿಸಿದರೆ ನಮ್ಮ ಕಾರ್ಯ ಸಾರ್ಥಕವಾಗುತ್ತದೆ" ಎಂದರು.
ಇದನ್ನು ಓದಿ:ಚುನಾವಣಾ ಪ್ರಚಾರದ ಶಬ್ದ ಬಳಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಲು ಚುನಾವಣಾ ಆಯೋಗ ಸೂಚನೆ