ಬೆಂಗಳೂರು: ಭಾರತ ಚುನಾವಣಾ ಆಯೋಗದಿಂದ ಆಯೋಜಿಸಿರುವ 4ನೇ ಜನರಲ್ ಅಸೆಂಬ್ಲಿ ಆಫ್ ಎ ವೆಬ್ ಕಾರ್ಯಕ್ರಮದ ಅಧಿಕೃತ ಉದ್ಘಾಟನೆ ಇಂದು ನೆರವೇರಿತು.
ವಿಶ್ವದ ವಿವಿಧ ಪ್ರಜಾಪ್ರಭುತ್ವ ರಾಷ್ಟ್ರಗಳ ಚುನಾವಣಾ ಸಂಸ್ಥೆಗಳು ಮತ್ತು ಅಧಿಕಾರಿಗಳ ಅಂತಾರಾಷ್ಟ್ರೀಯ ಸಮ್ಮೇಳನ ಸೆ.2ರಂದು ಆರಂಭವಾಗಿದ್ದು, ಇದರ ಅಧಿಕೃತ ಉದ್ಘಾಟನಾ ಸಮಾರಂಭ ನಗರದ ತಾಜ್ ವೆಸ್ಟೆಂಡ್ ಹೊಟೇಲಿನಲ್ಲಿ ಇಂದು ಜರುಗಿತು.
ಕಾರ್ಯಕ್ರಮದಲ್ಲಿ ಒಟ್ಟು 54ಕ್ಕೂ ಹೆಚ್ಚು ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯೋಗದ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ 145ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು, ಆಯೋಗದ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
"ಜನರಲ್ ಅಸೆಂಬ್ಲಿ ಆಫ್ ಎ ವೆಬ್" ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಮ್ಮೇಳನದ ಕೊನೆಯ ದಿನ ಸೆ.4 ರಂದು, "ಚುನಾವಣೆಗಳಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನದ ಉಪಕ್ರಮಗಳು ಮತ್ತು ಸವಾಲುಗಳು" ಎಂಬ ವಿಷಯದ ಮೇಲೆ ಚರ್ಚೆ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಅಶೋಕ್ ಲವಾಸಾ, ಸುಶೀಲ್ ಚಂದ್ರ ಎನ್ ಮತ್ತು ರೊಮೇನಿಯಾ ಚುನಾವಣಾ ಆಯೋಗದ ನಿರ್ಗಮಿತ ಅಧ್ಯಕ್ಷ ಅಯಾನ್ ಮಿಂಕು ರಾಡುಲೆಸ್ಕು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.