ಬೆಂಗಳೂರು:ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಆದರೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅಭ್ಯರ್ಥಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಮತದಾನ ನಡೆಯಲಿದೆ. ಇತ್ತ ಮೂರೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿವೆ. ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬುದು ಪದೇ ಪದೇ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಆಗ್ರಹ. ಆದರೆ, ಪ್ರತಿ ಚುನಾವಣೆಯಲ್ಲೂ ಹಲವು ಅಪರಾಧ ಪ್ರಕರಣ ಹೊಂದಿರುವ ಅಭ್ಯರ್ಥಿಗಳೇ ಕಣಕ್ಕಿಳಿಯುತ್ತಿದ್ದಾರೆ.
ರಾಜ್ಯದಲ್ಲೂ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿವೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅಭ್ಯರ್ಥಿಗಳ ಮೇಲೆ ಈ ಬಾರಿ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಈ ಬಾರಿ ಚುನಾವಣಾ ಆಯೋಗದ ಕಠಿಣ ನಿಯಮ ಪಾಲಿಸಬೇಕು. ಸುಪ್ರೀಂಕೋರ್ಟ್ ತೀರ್ಪಿನನ್ವಯ ಪರಿಷ್ಕೃತ ನಿಯಮಗಳನ್ನು ಪಾಲಿಸಲೇ ಬೇಕು. ಇಲ್ಲವಾದರೆ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿ ವಿರುದ್ಧ ಚು.ಆಯೋಗ ಕಠಿಣ ಕ್ರಮ ಕೈಗೊಳ್ಳಲಿದೆ.
ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿ ಮೇಲೆ ನಿಗಾ:ರಾಜಕೀಯ ಪಕ್ಷಗಳು ಅಪರಾಧ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬಗ್ಗೆ ತನ್ನ ವೆಬ್‌ಸೈಟ್, ಪತ್ರಿಕೆ ಮತ್ತು ದೂರದರ್ಶನದಲ್ಲಿ ಮಾಹಿತಿಯನ್ನು ಪ್ರಕಟಿಸಬೇಕು. ಮತದಾರರಿಗೆ ಅಭ್ಯರ್ಥಿಗಳ ಹಿನ್ನೆಲೆ ಬಗ್ಗೆ ತಿಳಿಯಲು ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ. ಅದರಂತೆ ನಾಮಪತ್ರ ಹಿಂಪಡೆಯುವ ದಿನಾಂಕದ ಮುಂಚಿತ 4 ದಿನಗಳ ಒಳಗೆ, ಮುಂದಿನ 5 ರಿಂದ 8ನೇ ದಿನಗಳ ನಡುವೆ, 9ನೇ ದಿನದಿಂದ ಪ್ರಚಾರದ ಕೊನೆಯ ದಿನದವರೆಗೆ (ಮತದಾನದ ದಿನಾಂಕದ ಮೊದಲು ಎರಡನೇ ದಿನ)ದಲ್ಲಿ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಮಾಹಿತಿಯನ್ನು ಪ್ರಕಟಿಸಬೇಕು. ಸುಪ್ರೀಂಕೋರ್ಟ್ ಆದೇಶದನ್ವಯ ಇದು ಕಡ್ಡಾಯವಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಚುನಾವಣಾಧಿಕಾರಿಗಳು ನಿಗಾ ಇಟ್ಟಿದ್ದಾರೆ.
ಕೇಂದ್ರ ಮತ್ತು ರಾಜ್ಯ ಚುನಾವಣಾ ಮಟ್ಟದಲ್ಲಿ ವಿವರವಾದ ಮಾಹಿತಿಯನ್ನು ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ (ಅಪರಾಧಗಳ ಸ್ವರೂಪ) ತಮ್ಮ ವೆಬ್ ಸೈಟ್‌ನಲ್ಲಿ ಅಪಲೋಡ್ ಮಾಡಬೇಕು. ಆರೋಪಿಸಲಾದ ವಿವರಗಳು, ಸಂಬಂಧಿತ ನ್ಯಾಯಾಲಯದ ಪ್ರಕರಣ ಸಂಖ್ಯೆ ಇತ್ಯಾದಿ, ಅಭ್ಯರ್ಥಿಯಾಗಿ ಆಯ್ಕೆಯಾಗಲು ಕಾರಣಗಳ ಜತೆಗೆ ಅಪರಾಧ ಹಿನ್ನೆಲೆ ಇಲ್ಲದ ಇತರ ಅಭ್ಯರ್ಥಿಗಳನ್ನು ಯಾಕೆ ಆಯ್ಕೆ ಮಾಡಲಾಗಲಿಲ್ಲ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.