ಕರ್ನಾಟಕ

karnataka

ETV Bharat / state

ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ಹೈಕೋರ್ಟ್​ಗೆ ಚು.ಆಯೋಗದ ಮಾಹಿತಿ - ಹೈಕೋರ್ಟ್​ಗೆ ಚುನಾವಣಾ ಆಯೋಗದ ಮಾಹಿತಿ

ಅವಧಿ ಮುಗಿದಿದ್ದ ರಾಜ್ಯದ 56 ಸ್ಥಳೀಯ ಸಂಸ್ಥೆಗಳಿಗೆ 2021ರ ಡಿ.30ರೊಳಗೆ ಚುನಾವಣೆ ನಡೆಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಇದರಿಂದಾಗಿ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯ ಇಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.

ಹೈಕೋರ್ಟ್
ಹೈಕೋರ್ಟ್

By

Published : Jan 14, 2022, 9:53 PM IST

ಬೆಂಗಳೂರು:ಅವಧಿ ಮುಗಿದಿದ್ದ ರಾಜ್ಯದ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಕಳೆದ ಡಿಸೆಂಬರ್ 30ರೊಳಗೆ ಚುನಾವಣೆ ನಡೆಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಮಾಹಿತಿ ನೀಡಿತು.

ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲು ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಮಾಹಿತಿ ನೀಡಿ, ಹೈಕೋರ್ಟ್ 2021ರ ನ.17ರಂದು ನೀಡಿದ್ದ ಆದೇಶದ ಅನುಸಾರ ಅವಧಿ ಮುಗಿದಿದ್ದ ರಾಜ್ಯದ 56 ಸ್ಥಳೀಯ ಸಂಸ್ಥೆಗಳಿಗೆ ಡಿ.30ರೊಳಗೆ ಚುನಾವಣೆ ನಡೆಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗಳಿಗೆ ಸಂಬಂಧಿಸಿದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಇದರಿಂದ 2 ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಅವಧಿ ಮುಗಿದಿದ್ದ ರಾಜ್ಯದ 56 ಸ್ಥಳೀಯ ಸಂಸ್ಥೆಗಳಿಗೆ 2021ರ ಡಿ.30ರೊಳಗೆ ಚುನಾವಣೆ ನಡೆಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಇದರಿಂದ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯ ಇಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.

ABOUT THE AUTHOR

...view details