ಕರ್ನಾಟಕ

karnataka

ETV Bharat / state

ಚುನಾವಣೆ ಪ್ರಣಾಳಿಕೆ ಮುನ್ನವೇ ಉಚಿತ ಕೊಡುಗೆಗಳ ಘೋಷಣೆ : ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಪಕ್ಷಗಳ ನಡುವೆ ಹೆಚ್ಚಿದ ಪೈಪೋಟಿ - ಈಟಿವಿ ಭಾರತ ಕನ್ನಡ

ವಿಧಾನಸಭೆ ಚುನಾವಣೆ ಹಿನ್ನಲೆ - ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ನಿಂದ ಉಚಿತ ಆಶ್ವಾಸನೆಗಳು - ಮತದಾರರನ್ನು ಸೆಳೆಯಲು ಪಕ್ಷಗಳ ಕಸರತ್ತು

election-assurance-by-various-parties-for-next-assembly-election
ಚುನಾವಣೆ ಪ್ರಣಾಳಿಕೆ ಮುನ್ನವೇ ಉಚಿತ ಕೊಡುಗೆಗಳ ಘೋಷಣೆ : ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಪಕ್ಷಗಳ ನಡುವೆ ಹೆಚ್ಚಿದ ಪೈಪೋಟಿ

By

Published : Jan 21, 2023, 6:30 PM IST

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಇನ್ನೂ ಘೋಷಣೆಯಾಗಿಲ್ಲ. ಚುನಾವಣಾ ಕಣ ಇನ್ನಷ್ಟೇ ರಂಗೇರಬೇಕಿದೆ. ಆದರೆ ರಾಜಕೀಯ ಪಕ್ಷಗಳು ಮಾತ್ರ ಈಗಿನಿಂದಲೇ ಮತದಾರರಿಗೆ ಆಕರ್ಷಕ ಉಚಿತ ಕೊಡುಗೆಗಳ ಚುನಾವಣೆ ಆಶ್ವಾಸನೆಗಳನ್ನು ಒಂದರ ನಂತರ ಒಂದರಂತೆ ಪ್ರಕಟಿಸತೊಡಗಿವೆ. ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಬೇಕಾಗಿದ್ದ ಭರವಸೆಗಳನ್ನು ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರದ ರ್ಯಾಲಿ ಮತ್ತು ಸಮಾವೇಶಗಳ ಸಂದರ್ಭದಲ್ಲಿ ಪೈಪೋಟಿಗಿಳಿದವರಂತೆ ಪ್ರಕಟಿಸಿ ಮತದಾರರ ಮನಸ್ಸು ಗೆಲ್ಲಲು ಕಸರತ್ತು ನಡೆಸುತ್ತಿವೆ.

ಪಕ್ಷಗಳಿಂದ ಚುನಾವಣಾ ಉಚಿತ ಕೊಡುಗೆ: ಉಚಿತ ಕೊಡುಗೆಗಳನ್ನು ಘೋಷಣೆ ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಂದು ರೀತಿಯ ಅನಾರೋಗ್ಯಕರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷವು ಮತದಾರರನ್ನು ಸೆಳೆಯಬಲ್ಲಂತಹ ಒಂದು ಅತ್ಯಾಕರ್ಷಕ ಚುನಾವಣೆ ಭರವಸೆ ಪ್ರಕಟಿಸಿದರೆ, ಅದಕ್ಕೆ ಪ್ರತಿಯಾಗಿ ತಕ್ಷಣ ಬಿಜೆಪಿ ಮತ್ತೊಂದು ಉಚಿತ ಕೊಡುಗೆ ಪ್ರಕಟಿಸಿ ಮತದಾರರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಇವೆರಡೂ ಪಕ್ಷಗಳಿಗೆ ತಾನೇನೂ ಕಡಿಮೆ ಇಲ್ಲವೆಂಬಂತೆ ಜಾತ್ಯಾತೀತ ಜನತದಳವು ವಿಭಿನ್ನವಾದ ಉಚಿತ ಕೊಡುಗೆ ಪ್ರಕಟಿಸಿ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಪ್ರಜಾಧ್ವನಿ ಎನ್ನುವ ಬಸ್ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಪಕ್ಷ ಯಾತ್ರೆಯ ಮೊದಲ ದಿನದ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಮನೆಗಳಿಗೆ 200 ಯುನಿಟ್ ತನಕ ಉಚಿತ ವಿದ್ಯುತ್ ನೀಡಲಾಗುವುದೆಂದು ಘೋಷಣೆ ಮಾಡಿತು. ಕಾಂಗ್ರೆಸ್ ನ ಈ ಆಕರ್ಷಕ ಘೋಷಣೆಯನ್ನು ಬಿಜೆಪಿ ಕಟುವಾಗಿ ಟೀಕಿಸುವ ಜೊತೆಗೆ ಕಾಂಗ್ರೆಸ್ ಮೇಲೆ ಹರಿಹಾಯ್ದಿತು. ಇದೊಂದು ಬೋಗಸ್ ಭರವಸೆ ಅನುಷ್ಟಾನಕ್ಕೆ ತರಲು ಸಾಧ್ಯವಿಲ್ಲ ಪ್ರತಿಪಾದಿಸಿದೆ.

ಮತದಾರರನ್ನು ಸೆಳೆಯಲು ವಿವಿಧ ಕಸರತ್ತು :ಇಂಧನ ಸಚಿವ ಸುನಿಲ್ ಕುಮಾರ್ ಮತ್ತು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್​ ಜೋಷಿ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ತರುವುದು ಕಷ್ಟಕರ. ಈ ಯೋಜನೆಗೆ ಸುಮಾರು 20 ಸಾವಿರ ಕೋಟಿಗೂ ಹೆಚ್ಚಿನ ಹಣ ಬೇಕಾಗುತ್ತದೆ. ಇಷ್ಟೊಂದು ಮೊತ್ತದ ಹಣ ಹೊಂದಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಣೆ ಮಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದು ನಿಶ್ಚಿತವೆಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರಾಜ್ಯ ಸರಕಾರ ಈಗಾಗಲೇ ಎಸ್ಸಿಗಳಿಗೆ ತಿಂಗಳಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ನಮ್ಮದು ಆಶ್ವಾಸನೆಯಲ್ಲ. ಭರವಸೆಗಳನ್ನು ಈಡೇರಿಸಿದ ಸರಕಾರವೆಂದು ಬೆನ್ನು ತಟ್ಟಿಕೊಂಡಿದ್ದಾರೆ.

ಉಚಿತ ವಿದ್ಯುತ್ ಯೋಜನೆಗೆ ಆಡಳಿತ ಪಕ್ಷ ಬಿಜೆಪಿಯಿಂದ ತೀವ್ರವಾದ ಟೀಕೆ ವ್ಯಕ್ತವಾದ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷ ಮತ್ತೊಂದು ಆಕರ್ಷಕವಾದ ಮಹಿಳೆಯರನ್ನು ಸೆಳೆಯುವಂತಹ ಚುನಾವಣೆ ಆಶ್ವಾಸನೆ ಪ್ರಕಟಿಸಿದೆ. ಬೆಂಗಳೂರಿನಲ್ಲಿ ''ನಾ ನಾಯಕಿ'' ಎನ್ನುವ ಮಹಿಳಾ ಸಮಾವೇಶ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕುಟುಂಬ ನಿಭಾಯಿಸುವ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಗ್ರಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿತು. ಇದಲ್ಲದೆ ಇನ್ನೂ ಹತ್ತು ಹಲವು ಜನಪರ ಯೋಜನೆಗಳಿಗೆ ಸಂಬಂಧಿಸಿದ ಚುನಾವಣಾ ಆಶ್ವಾಸನೆಗಳನ್ನು ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ.

ಆಶ್ವಾಸನೆಗಳಿಂದ ಮತದಾರರನ್ನು ತನ್ನತ್ತ ಸೆಳೆಯಲು ತಂತ್ರ: ಕಾಂಗ್ರೆಸ್​ನ ಈ ಆಶ್ವಾಸನೆಗಳಿಗೆ ತಿರುಗೇಟು ನೀಡಿರುವ ಬಿಜೆಪಿ ಪಕ್ಷವು, ಬಜೆಟ್ ನಲ್ಲಿ ಪ್ರಕಟಿಸಲು ಸಿದ್ಧಪಡಿಸಿಟ್ಟುಕೊಳ್ಳಲಾಗಿದ್ದ ಮಹಿಳೆಯರಿಗೆ ನೆರವು ನೀಡುವ ಯೋಜನೆಯನ್ನು ಕಾಂಗ್ರೆಸ್ ಘೋಷಿಸಿದೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಲಿರುವ ಮುಂಗಡಪತ್ರದಲ್ಲಿ ಬಿಪಿಎಲ್ ಕಾರ್ಡ್ ಇರುವ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೆರವು ನೀಡುವ ಯೋಜನೆ ಪ್ರಕಟಿಸುವ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬಿಜೆಪಿಯು ಕಾಂಗ್ರೆಸ್ ಜೊತೆ ಪೈಪೋಟಿಗಿಳಿದಿದ್ದು ಚುನಾವಣಾ ಆಶ್ವಾಸನೆಗಳಿಗೆ ಆಕರ್ಷಿತರಾಗಿ ಮತದಾರರು ಕಾಂಗ್ರೆಸ್ ಕಡೆ ವಾಲಬಾರದೆಂದು ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ.

ಮತ್ತೊಂದೆಡೆ, ಜಾತ್ಯತೀತ ಜನತಾದಳ ಪಕ್ಷವು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ಆಶ್ವಾಸನೆ ನೀಡುವುದರಲ್ಲಿ ತಾನೇನು ಕಡಿಮೆ ಇಲ್ಲ ಎನ್ನುವಂತೆ ಅತ್ಯಾಕರ್ಷಕ ಚುನಾವಣಾ ಆಶ್ವಾಸನೆಗಳನ್ನು ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಪ್ರಕಟಿಸತೊಡಗಿದೆ. ದ್ವಿತೀಯ ಪಿಯುಸಿ ತನಕ ಉಚಿತ ಶಿಕ್ಷಣವನ್ನು ಜೆಡಿಎಸ್ ಸರಕಾರ ನೀಡಲಿದೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ಮತ್ತು ಕಾಂಗ್ರೆಸ್ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಎರಡು ಸಾವಿರ ರೂಪಾಯಿ ಸಹಾಯಧನ ನೀಡುವ ಚುನಾವಣಾ ಆಶ್ವಾಸನೆ ಘೋಷಣೆ ಮಾಡಿದ್ದಕ್ಕೆ ಪ್ರತಿಯಾಗಿ ಸ್ತ್ರೀಶಕ್ತಿ ಸಂಘಗಳು ಪಡೆದಿರುವ ಸಾಲವನ್ನು ಜೆಡಿಎಸ್ ಸರ್ಕಾರ ಆಡಳಿತಕ್ಕೆ ಬಂದರೆ ಮನ್ನಾ ಮಾಡಲಾಗುವುದು ಎಂದು ಪ್ರಕಟಿಸಿದೆ.

ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮತದಾರರನ್ನು ಆಕರ್ಷಿಸಲು ಉಚಿತ ಕೊಡುಗೆಗಳ ಮಹಾಪೂರವನ್ನೇ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಘೋಷಣೆ ಮಾಡಲು ಆರಂಭಿಸಿವೆ. ಆಡಳಿತ ರೂಢ ಪಕ್ಷ ಬಿಜೆಪಿ ಎಸ್ ಸಿ, ಎಸ್ ಟಿ ಜನಾಂಗದ ಮೀಸಲಾತಿಯನ್ನು ಹೆಚ್ಚಳ ಮಾಡಿದ ಬೆನ್ನಲ್ಲೇ ಹಾಗೂ ವೀರಶೈವ ಲಿಂಗಾಯಿತ ಮತ್ತು ಒಕ್ಕಲಿಗರಿಗೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ 2 ಸಿ ಮತ್ತು 2 ಡಿ ಮೀಸಲಾತಿ ಕೆಟಗರಿ ಸೃಷ್ಟಿಸಿ ಹೆಚ್ಚಿನ ಮೀಸಲಾತಿ ನೀಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮತದಾರರನ್ನು ಓಲೈಸುವಂತ ಯೋಜನೆಗಳನ್ನು ಪ್ರಕಟಿಸಲು ಆರಂಭಿಸಿವೆ.

ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವ ಪ್ರಮುಖ ಘೋಷಣೆ ಯೋಜನೆಗಳನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ರ್ಯಾಲಿಯ ಸಂದರ್ಭದಲ್ಲಿ ಪ್ರಕಟಿಸಿ ಮತದಾರರ ಗಮನವನ್ನು ಸೆಳೆಯತೊಡಗಿದೆ. ಮೂರು ಪಕ್ಷಗಳು ಪ್ರಕಟಿಸುವ ಚುನಾವಣಾ ಆಶ್ವಾಸನೆಗಳು ಹಲವು ಗೊಂದಲಗಳಿಂದ ಕೂಡಿದ್ದು ಯಾರಿಗೆ ಯೋಜನೆಯ ಲಾಭ ಸಿಗಲಿದೆ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ನೀಡದೆ ಮತದಾರರನ್ನು ಗೊಂದಲದಲ್ಲಿ ಇಟ್ಟಿವೆ.

ಇದನ್ನೂ ಓದಿ :ವಿಜಯಪುರಕ್ಕೆ ಬಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಸ್ವಾಗತಿಸಲು ಬಾರದ ಯತ್ನಾಳ್​​

ABOUT THE AUTHOR

...view details