ಬೆಂಗಳೂರು: ಮಾನಸಿಕ ಖಿನ್ನತೆಗೊಳಗಾಗಿ ಡೆತ್ ನೋಟ್ ಬರೆದಿಟ್ಟು ಏಕಲವ್ಯ ಪ್ರಶಸ್ತಿ ವಿಜೇತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರೇನಹಳ್ಳಿ ಮನೆಯೊಂದರಲ್ಲಿ ನಡೆದಿದೆ.
ಶಿಲ್ಪಾ(41) ಎಂಬುವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದವರು. ಮಾರೇನಹಳ್ಳಿಯಲ್ಲಿ ವಾಸವಾಗಿದ್ದ ಇವರ ಕ್ರೀಡಾ ಕ್ಷೇತ್ರದ ಸಾಧನೆ ಗುರುತಿಸಿ ಆರು ವರ್ಷದ ಹಿಂದೆ ಏಕಲವ್ಯ ಪ್ರಶಸ್ತಿ ನೀಡಲಾಗಿತ್ತು. ಕ್ರೀಡಾ ಶಾಲೆಯೊಂದರಲ್ಲಿ ಕೆಲ ವರ್ಷಗಳಿಂದ ಕೋಚ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಕಳೆದ ವರ್ಷ ಲಾಕ್ಡೌನ್ ಹಿನ್ನೆಲೆ ಕೆಲಸ ಕಳೆದುಕೊಂಡಿದ್ದರು. ನೀಲಕೃಷ್ಣ ಪ್ರಸಾದ್ ಎಂಬುವರೊಂದಿಗೆ ಮದುವೆಯಾಗಿದ್ದ ಶಿಲ್ಪಾಗೆ ಮಕ್ಕಳು ಸಹ ಇರಲಿಲ್ಲ. ನಾಲ್ಕು ತಿಂಗಳ ಹಿಂದೆ ತಾಯಿಯ ಸಾವು ಇವರನ್ನು ಮತ್ತಷ್ಟು ಖಿನ್ನತೆಗೊಳಗಾಗುವಂತೆ ಮಾಡಿತ್ತು. ಈ ಎಲ್ಲಾ ಕಾರಣದಿಂದ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಅಂದು ಕೊರೊನಾ, ಇಂದು ಅದರ 2ನೇ ಅಲೆ: ಯುಗಾದಿಗೂ ಕಹಿಯಾದ ಮಹಾಮಾರಿ
ಪತಿ ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಪತಿ ನಿನ್ನೆ ಸಂಜೆ ಮನೆಗೆ ಬಂದು ನೋಡಿದಾಗ ಸುಸೈಡ್ ಮಾಡಿ ಕೊಂಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.