ಬೆಂಗಳೂರು: ಸಂಶೋಧನಾ ಆಧಾರಿತವಾಗಿರುವ ಎಕಾಗ್ರಿಡ್ ವಿಶ್ವವಿದ್ಯಾಲಯ ಬೆಂಗಳೂರು ಅಥವಾ ಮೈಸೂರಿನಲ್ಲಿ ತನ್ನ ಕ್ಯಾಂಪಸ್ ತೆರೆಯಲು ಆಸಕ್ತಿ ತಾಳಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ 200 ಎಕರೆ ಜಮೀನು ಬೇಕು ಎಂದು ಕೇಳಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ವಿವಿ ಸ್ಥಾಪನೆ ಕುರಿತು ವಿಶ್ವವಿದ್ಯಾಲಯದ ಪ್ರತಿನಿಧಿಗಳಾದ ಪ್ರೊ. ಕೃಷ್ಣ ಸಾರಸ್ವತ್ ಮತ್ತು ಸಿಒಒ ಶೈಲೇಂದ್ರ ಕುಮಾರ್ ಅವರೊಂದಿಗೆ ವಿಸ್ತೃತ ವಿಚಾರ ವಿನಿಮಯ ನಡೆಸಲಾಗಿದೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2018ರಲ್ಲಿ ಭಾರತದಲ್ಲೇ ಕಾರ್ಯಾರಂಭ ಮಾಡಿರುವ ಎಕಾಗ್ರಿಡ್ ವಿಶ್ವವಿದ್ಯಾಲಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವ ಗುರಿ ಹೊಂದಿದೆ. ಮುಂಬರುವ ದಿನಗಳಲ್ಲಿ ವಿವಿಯು ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲು ಉದ್ದೇಶಿಸಿದೆ. ಜತೆಗೆ ದೇಶದಲ್ಲಿ ಅದು ಅಗ್ರ ಶ್ರೇಣಿಯ ಮೊದಲ 25 ಸ್ಥಾನಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದೆ. ಕರ್ನಾಟಕದಲ್ಲಿ ಇರುವ ಉನ್ನತ ಶಿಕ್ಷಣ ಕಾರ್ಯ ಪರಿಸರದಲ್ಲಿರುವ ಅತ್ಯುತ್ತಮ ನೀತಿಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಫಿಕ್ಟೀವ್ ಕಂಪನಿ ಜತೆ ಮಾತುಕತೆ:ಮೆಕ್ಯಾನಿಕಲ್ ಬಿಡಿಭಾಗಗಳ ಉತ್ಪಾದನೆಗೆ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಫಿಕ್ಟೀವ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಕೂಡ ಇದೇ ಸಂದರ್ಭದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಗ್ರ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.