ಬೆಂಗಳೂರು :ಕೋರಮಂಗಲದ ಈಜಿಪುರದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ವಿತರಿಸಬೇಕಾದ ಉದ್ದೇಶಿತ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ವಿಳಂಬ ಕುರಿತಂತೆ ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್‌ಗೆ ಪ್ರಮಾಣಪತ್ರದ ಮೂಲಕ ಮಾಹಿತಿ ಒದಗಿಸಿದೆ. ಇಡೀ ಕಾಮಗಾರಿಯನ್ನು ಒಂದು ಘಟಕವೆಂದು ಪರಿಗಣಿಸಲಾಗುವುದು. ವಾಣಿಜ್ಯ ಉದ್ದೇಶಕ್ಕೆ ಮೀಸಲಿಟ್ಟಿರುವ ಹೆಚ್ಚುವರಿ ಜಾಗವನ್ನು ಗುತ್ತಿಗೆದಾರ ಸಂಸ್ಥೆಗೆ ನೀಡಲಾಗದು ಎಂದು ಸರ್ಕಾರ ತಿಳಿಸಿದೆ.
ವಸತಿ ಸಮುಚ್ಛಯ ನಿರ್ಮಾಣ ವಿಳಂಬ ಪ್ರಶ್ನಿಸಿ ಈಜಿಪುರ ನಿವಾಸಿಗಳ ಸಾಮಾಜಿಕ ಕಲ್ಯಾಣ ಸಂಘ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ.ಆಶೋಕ್ ಎಸ್.ಕಿಣಗಿ ಅವರಿದ್ದ ಪೀಠ ನಡೆಸಿತು. ಈ ವೇಳೆ ಸರ್ಕಾರ ಪರ ವಕೀಲರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು. ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಸರ್ಕಾರದ ಪರ ವಕೀಲರು, ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್. ರವಿಕುಮಾರ್ ಪರ ಪ್ರಮಾಣಪತ್ರವನ್ನು ಸಲ್ಲಿಸಿದ್ದು, ಬಳಕೆ ಮಾಡಲಾಗದ ಫ್ಲೋರ್ ಅಸೆಸ್‌ಮೆಂಟ್ ರೇಶ್ಯೂ (ಎಫ್‌ಎಆರ್) ಅನ್ನು ಗುತ್ತಿಗೆದಾರರಿಗೆ ನೀಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, ಬಿಬಿಎಂಪಿ ಮತ್ತು ಬಿಡಿಎ ಮನವಿಗಳ ಬಗ್ಗೆ ಪರಿಶೀಲಿಸಲು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2023ರ ಜ.6ರಂದು ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಎಲ್ಲ ಪ್ರತಿನಿಧಿಗಳು ಭಾಗಿಯಾಗಿದ್ದರು. ಬಿಡಿಎ, ಬಿಬಿಎಂಪಿಗಳ ಮನವಿ ಬಗ್ಗೆ ಚರ್ಚೆ ನಡೆಸಲಾಯಿತು. ನಿಯಮದಂತೆ ಮಿಶ್ರ ಅಭಿವೃದ್ಧಿ ಯೋಜನೆಗೆ ಪ್ರತ್ಯೇಕ ನಿಯಮಗಳಲ್ಲಿ ಇಡೀ ಅಭಿವೃದ್ಧಿ ಯೋಜನೆಯನ್ನು ಒಂದೇ ಘಟಕವೆಂದು ಪರಿಗಣಿಸುವಂತೆ ಸ್ಪಷ್ಟನೆ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ಬಿಬಿಎಂಪಿ ಮತ್ತು ಬಿಡಿಎ ನಿಯಮದಂತೆ ನಕ್ಷೆ ಅನುಮೋದನೆಯನ್ನು ಪರಿಗಣಿಸಬೇಕು ಮತ್ತು ವಲಯ ಮತ್ತು ಕಾಯಿದೆಗಳ ಅನುಸಾರ ನಕ್ಷೆ ಅನುಮೋದನೆ ಹೊಣೆ ಆ ಸಂಸ್ಥೆಗಳಿಗೆ ಬಿಟ್ಟದ್ದೆಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಪ್ರಮಾಣಪತ್ರವನ್ನು ಪರಿಗಣಿಸಿದ ನ್ಯಾಯಾಲಯ, ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿ ಗುತ್ತಿಗೆದಾರರಿಗೆ ಸೂಚಿಸಿ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿತು. ಕಳೆದ ವಿಚಾರಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ಆಯುಕ್ತ ಜಿ. ಕುಮಾರ್ ನಾಯಕ್ ಮತ್ತು ಮೇವರಿಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಉದಯ ಗರುಡಾಚಾರ್ ಹಾಜರಿದ್ದರು.
ಇದನ್ನೂ ಓದಿ:ಭೀಮಾ ನದಿಗೆ ನೀರಿನ ಹರಿವು ಕುರಿತಂತೆ ಮಹಾರಾಷ್ಟ್ರ ಸರ್ಕಾರದಿಂದ ತಪ್ಪು ಮಾಹಿತಿ: ಲಕ್ಷ್ಮಣ ಸವದಿ