ಬೆಂಗಳೂರು:ಸಾಕಷ್ಟು ಅನುದಾನ ಇದ್ದರೂ ರಸ್ತೆ ಗುಂಡಿಗಳನ್ನು ಮುಚ್ಚದೇ ಪಾಲಿಕೆಗೆ ಕೆಟ್ಟ ಹೆಸರು ತರುತ್ತಿರುವ ಎಂಜಿನಿಯರ್ ವಿಭಾಗದ ಅಧಿಕಾರಿಗಳ ವಿರುದ್ಧ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಂಬಿಕೆ ಗರಂ ಆಗಿದ್ದಾರೆ.
ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಹೋಗಿ. ಕೆಲಸ ಮಾಡಲು ಕಷ್ಟವೆನಿಸಿದರೆ ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೋಗಿಬಿಡಿ ಎಂದು ನಗರದ ಪೂರ್ವ ವಲಯದ ರಸ್ತೆ ಗುಂಡಿಗಳು, ಮಣ್ಣು ರಾಶಿ, ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ನಡೆಸಿದ ಸಭೆಯಲ್ಲಿ ಸೂಚನೆ ನೀಡಿದ್ರು.
ರಸ್ತೆ ಗುಂಡಿಯಿಂದ ಸಾರ್ವಜನಿಕರಿಗೆ ಅಪಘಾತವಾದ್ರೆ, ರಸ್ತೆಗಳಲ್ಲಿ ಕಾಮಗಾರಿ ನಡೆಯುವ ವೇಳೆ ಬ್ಯಾರಿಕೇಡ್ಗಳನ್ನು ಅಳವಡಿಸದೇ ಅಪಘಾತಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗಲಿದ್ದಾರೆ. ಅವರ ಚಿಕಿತ್ಸಾ ವೆಚ್ಚವನ್ನು ಅಧಿಕಾರಿಗಳೇ ಪಾವತಿಸಬೇಕಾಗುತ್ತದೆ ಎಂದು ಖಡಕ್ ಆಗೇ ನುಡಿದರು. ಜೊತೆಗೆ ಗುತ್ತಿಗೆದಾರರಿಗೆ ಬ್ಯಾರಿಕೇಡ್ ಅಳವಡಿಸಿ ಕೆಲಸ ಮಾಡುವಂತೆ ತಿಳಿಸಿ ಎಂದು ಈ ವೇಳೆ ಸೂಚಿಸಿದರು.